ಪುಟ:ಉಮರನ ಒಸಗೆ.djvu/೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

೧೬

ಸಮಾಧಿಯಿರುವುದು" ಎಂದು ಹೇಳಿದ್ದನಂತೆ. ಕೆಲವು ವರ್ಷಗಳ ಮೇಲೆ ಸ್ವಾಜಾ ನಿಜಾಮಿಯು ನೀಷಾಪುರಕ್ಕೆ ಹೋಗಿ ತನ್ನ ಗುರುವಿನ ಗೋರಿಯನ್ನು ಹುಡುಕಿ ನೋಡಲು, ಅದು ಒಂದು ತೋಟದ ಹೊರಗಡೆ, ಆವರಣದ ಗೋಡೆಯ ಪಕ್ಕದಲ್ಲಿ, ತೋಟದ ಗಿಡಗಳ ಕೊಂಬೆಗಳು ಹರಡಿ ಉದಿರಿಸಿದ್ದ ಹೂಗಳ ರಾಶಿಯ ಹೊದಿಕೆಯ ಕೆಳಗೆ ಅವಿತುಕೊಂಡಿದ್ದುದನ್ನು ಕಂಡನಂತೆ.

ಉಮರನ ಕಾವ್ಯದಲ್ಲಿ ಇದೇ ಬಗೆಯ ಮನೋಹರತೆಯು ಪ್ರತಿಫಲಿಸಿರುವುದರಿಂದಲೇ ಅದು ಸಕಲ ಜನ ವರ್ಗಗಳ ಆದರಣೆಯನ್ನೂ ಪಡೆದಿದೆ. ಅದು ಇಂಗ್ಲಿಷ್, ಫ್ರೆಂಚ್, ಜಲ್ಮನ್, ರಷ್ಯನ್ ಮೊದಲಾದ ಅನೇಕ ಐರೋಪ್ಯ ಭಾಷೆಗಳಿಗೆ, ಒಂದೊಂದರಲ್ಲಿಯ ಅನೇಕ ಮಂದಿ ವಿದ್ಯುಸಿಕರಿಂದ, ಪದ್ಯರೂಪಗಳಲ್ಲಿಯ ಗದ್ಯ ರೂಪಗಳಲ್ಲಿಯ ಪರಿವರ್ತಿತವಾಗಿದೆ. ನಮ್ಮ ದೇಶದ ಮೊಗಲಾಯಿ ಪಾದಷಹರಲ್ಲಿ ಅತ್ಯಂತ ಪ್ರಖ್ಯಾತನಾದ ಅಕ್ಷರ್‌ ಚಕ್ರವರ್ತಿಗೆ ಉಮರನ ಕಾವ್ಯವು ಅತಿ ಪ್ರಿಯವಾಗಿತ್ತೆಂದು ತಿಳಿದು ಬಂದಿದೆ. ಹೆಚ್ಚು ಮಾತೇಕೆ ? ಸಕಲ ಭೂಮಂಡಲದ ಅತ್ಯುತ್ತಮ ಕಾವ್ಯರತ್ನ ಸಂಗ್ರಹಾಲಯದಲ್ಲಿ ಮೊದಲು ಗಣ್ಯವೆನಿಸುವವುಗಳ ಪೈಕಿ ಉಮರನ ಕೃತಿಯೊಂದೆಂದು ಸಹೃದಯರಾದ ಪಂಡಿತರು ಹೇಳಿದ್ದಾರೆ. "ಭಗವದ್ಗೀತೆ","ಬೈಬಲ್", ಗ್ರೀಕ್ ನಾಟಕಗಳು, ಷೇಕ್ಸ್‌ಪಿಯರಿನ ನಾಟಕಗಳು ಮೊದಲಾದ ಹತ್ತು ಹನ್ನೆರಡು ಗ್ರಂಥಗಳನ್ನು ಬಿಟ್ಟರೆ, ಉಮರನ ಕಾವ್ಯದ ಸಂಬಂಧದಲ್ಲಿ ಹುಟ್ಟಿರುವಷ್ಟು ವ್ಯಾಖ್ಯಾನಗಳೂ ಪ್ರಬಂಧಗಳೂ ಪ್ರಪಂಚದ ಮತ್ತಾವ ಕಾವ್ಯದ ವಿಷಯದಲ್ಲಿಯೂ ಆಗಿಲ್ಲವೆಂದು ಹೇಳಬಹುದು. ಈ ಉಮರ-ಸಾಹಿತ್ಯವು ಇನ್ನೂ ಬೆಳೆಯುತ್ತಿದೆ.