ಅಲ್ಲಗಳೆದರು. ನಮ್ಮ ದೇಶದಲ್ಲಿ ಪಂಡಿತರಾಜನೆಂದು ಪ್ರಸಿದ್ದನಾಗಿರುವ ಜಗನ್ನಾಥ ಕವಿಯನ್ನು ವ್ರಾತ್ಯನೆಂದು ವೈದಿಕರು ದೂಷಿಸಿ ಬಹಿಷ್ಕರಿಸಿದ್ದರೆಂದು ಕಥೆಯಿಲ್ಲವೆ ? ಪೂರ್ವ ಸಮಯವರ್ತಿಗಳಾದವರು ಇತರರ ವಿಷಯದಲ್ಲಿ ಎಷ್ಟು ಕರುಣೆ ವಿನಯಗಳನ್ನು ತೋರಿದರೂ, ತಮ್ಮ ದಾರಿಯನ್ನು ತುಳಿಯಲಾರದವರ ವಿಷಯದಲ್ಲಿ ಮಾತ್ರ ಸ್ವಲ್ಪವೂ ಸಹನೆ ಕನಿಕರಗಳನ್ನು ತೋರಲಾರರು. ಈ ಕಾರಣದಿಂದ ಉಮರನ ಕಾವ್ಯಕ್ಕೆ ಆತನ ಕಾಲದ ಆ ದೇಶದ ವಿದ್ವದ್ಗೋಷ್ಠಿಯಲ್ಲಿ ಮನ್ನಣೆ ದೊರೆಯದೆ ಹೋಯಿತು.
ಆದರೆ ಸಾಮಾನ್ಯ ಜನದ ಮನಸ್ಸು ಮತ ಚರ್ಚೆಯ ಭೇದಾಂಶವೊಂದನ್ನೇ ಲೆಕ್ಕದಲ್ಲಿಟ್ಟುಕೊಂಡಿರುವುದಿಲ್ಲ. ಯುಕ್ತಿಯುಕ್ತವಾದ ನುಡಿಯನ್ನು ಕೇಳಿದೊಡನೆಯೇ ಅದು, ಭೇದ ವಿವರಗಳನ್ನು ಮರೆತು, ಕುತೂಹಲದಿಂದ ಆಲಿಸುವುದು. ಹೀಗೆ ಉಮರನ ಸ್ವತಂತ್ರ ವಿಚಾರದ ರೀತಿಯು ಸಾಮಾನ್ಯ ಜನಕ್ಕೆ ಇಷ್ಟವೇ ಆಯಿತು. ಕ್ರಮೇಣ ಆತನ ಕಾವ್ಯವು ಲೋಕಪ್ರಿಯವಾಗಿ, ಇತರ ಕವಿಗಳಿಗೆ ನೂತನ ಮಾರ್ಗ ಪ್ರದರ್ಶಕವೂ ಆಯಿತು. ಉಮರನ ತರುವಾಯ ವಿಖ್ಯಾತರಾದ ಹಾಫೀಸ್ ಮುಂತಾದ ಕವಿಗಳು ಬಹು ಮಟ್ಟಿಗೆ ಉಮರನ ಅನುಯಾಯಿಗಳೇ ಎಂದು ತಿಳಿದವರು ಹೇಳಿದ್ದಾರೆ.
ಉಮರನು ಒಂದು ಶತಮಾನ ಪೂರ್ತಿಯಾಗಿ ಜೀವಿಸಿದಂತೆ ಕಾಣುತ್ತದೆ. ಆತನು ಸದಾ ಸಂತುಷ್ಟಚಿತ್ತನಾಗಿದ್ದು, ಸಂತೋಷದಿಂದ ಅವತಾರ ಮುಗಿಸಿಕೊಂಡನೆಂಬುದಕ್ಕೆ ದೃಷ್ಟಾಂತವಾದ ಕಥೆಯೊಂದಿದೆ. ಆತನು ಒಂದು ದಿನ ಒಂದು ತೋಟದಲ್ಲಿ ಖ್ವಾಜಾ ನಿಜಾಮಿ ಎಂಬ ತನ್ನ ಶಿಷ್ಯನೊಡನೆ ಮಾತನಾಡುತ್ತಿದ್ದ ಕಾಲದಲ್ಲಿ -- "ಎಲ್ಲಿ ಉತ್ತರ ದಿಕ್ಕಿನ ಗಾಳಿಯು ಗುಲಾಬಿ ಹೂಗಳನ್ನು ತಂದು ಅಂಜಲಿಯೆರಚುವುದೋ ಅಂಥಾ ಸ್ಥಳದಲ್ಲಿ ನನ್ನ