ಪುಟ:ಉಮರನ ಒಸಗೆ.djvu/೩೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

೩೧ನಮ್ಮ ಜೀವನವು ಸರಿಯಾಗಿ ನಡೆದು ಉತ್ತಮಪಡಬೇಕಾದರೆ, ನಾವು ಅದಕ್ಕೆ ಬೇಕಾದುದನ್ನು ಹುಡುಕಿ ಸಂಪಾದಿಸುವ ಪ್ರಯತ್ನವು ಎಷ್ಟು ಅವಶ್ಯವೋ, ಇರುವುದನ್ನು ಉಪಯೋಗಿಸಿ ಕೊಂಡು ಸಂತೋಷ ಪಡುವ ಮನಸ್ಸಮಾಧಾನವೂ ಅಷ್ಟು ಅವಶ್ಯ. ಸಂತೋಷಪಡಲಾರದವನಿಗೆ ಉತ್ಸಾಹ ಪ್ರಯತ್ನಗಳೆಲ್ಲಿಂದ ಬಂದಾವು? ನಮ್ಮ ಪುರಾತನರೂ "ಸಂತೋಷಂ ಜನಯೇ ತ್ಪ್ರಾಜ್ಞಃ" ಎಂದು ಹೇಳಿಲ್ಲವೆ? ಈ ಪ್ರಪಂಚದಲ್ಲಿ ನಮ್ಮನ್ನು ಕಾಡಿಸಿ ಅಳಿಸತಕ್ಕ ಸಂದರ್ಭಗಳು ಲೆಕ್ಕವಿಲ್ಲದಷ್ಟು ಇರುವುದು ನಿಜ , ಆದರೆ ಅದು ಹಾಗಿರುವುದೆಂಬ ಕಾರಣದಿಂದಲೇ-ಆ ಸಂದರ್ಭಗಳ ನಡುವೆ ನಮಗೆ ಸಂತೋಷ ಶಾಂತಿಗಳನ್ನುಂಟು ಮಾಡಬಲ್ಲ ಸಂದರ್ಭಗಳೂ ಕೆಲವು ಇರುವುವೆಂಬುದನ್ನು ನಾವು ಮರೆಯಬಾರದು. "ಈ ಜನ್ಮ ಸಾಕು" ಎಂದೇಕೆ ನರಳುವುದು ? ಸಾವು ಬರುವಾಗ ಬರಲಿ ; ಅದು ಬರುವವರೆಗೂ ಬದುಕೋಣ, ಆದಷ್ಟು ಚೆನ್ನಾಗಿ ಬದುಕೋಣ-ಇದೇ ಉಮರನ ಒಸಗೆ..

ತಾಪತ್ರಯದ ಗೋಳಾಟವೆಂದೆಂದಿಗೂ ಇದ್ದೇ ಇದೆ ; ಒಪ್ಪತ್ತಾದರೂ ಉಲ್ಲಾಸದಿಂದ ಇರೋಣ-ಎಂದು ಯಾರಿಗೆ ತಾನೆ ಒಂದೊಂದು ಸಲವಾದರೂ ಎನ್ನಿಸುವುದಿಲ್ಲ? ಇದರಲ್ಲಿ ಅಧರ್ಮವೇನೂ ಇಲ್ಲ; ಈ ಪ್ರವೃತ್ತಿಯ ಬೇರುಗಳು ಮಾನುಷ ಸ್ವಭಾವದಲ್ಲೇ ಅಡಗಿವೆ. ಹೀಗೆ ಸೃಷ್ಟಿ ಭಾಗವಾಗಿ, ಹೆರರಿಗೆ ಕೆಡುಕಾಗದೆ, ನಮ್ಮ ಚಿತ್ತಸ್ವಾಸ್ಥ್ಯಕ್ಕೆ ಸಾಧಕವಾಗುವ ಮಿತ ಸುಖಾಪೇಕ್ಷೆಯು ನಮ್ಮ ಸಾಮಾನ್ಯ ಧರ್ಮದ ಒಂದು ಮುಖ್ಯಾಂಗವೇ ಎಂದು ಹೇಳಬಹುದಲ್ಲವೆ? ಅದು ಧರ್ಮದ ಪರಿಪೂರ್ಣರೂಪವಲ್ಲದಿರಬಹುದು; ಆದರೆ ಧರ್ಮದ ಅನೇಕ ಪ್ರಕಾರಗಳಲ್ಲಿ ಅದೂ ಒಂದೆಂಬುದಕ್ಕೆ ಅಡ್ಡಿಯಿರದು. ಈ ಜೀವನ ನೀತಿಯ ಮೇಲ್ಮೆಯನ್ನೂ ಸೊಬಗನ್ನೂ ಮನಸೊಪ್ಪುವಂತೆ ತೋರಿಸುವುದೇ ಉಮರನ ಒಸಗೆ..