ಪುಟ:ಉಮರನ ಒಸಗೆ.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ

೩೦

ಸಂಗೀತ ; ಒಬ್ಬ ಅನುರಾಗಿಣಿ-ಇಷ್ಟನ್ನೇ[೧] ಆತನು ಬಂಗುಸು ವುದು. ಈ ಬಯಕೆಯಲ್ಲಿ ದೋಷವೇನಿದೆ ? ನಮ್ಮ ಭಗವದ್ಗೀತೆಯಲ್ಲಿಯೇ :-

ಧರ್ಮಾSವಿರುದ್ಯೋ ಭೂತೇಷು ಕಾಮೋಸ್ಮಿ ಭರತರ್ಷಭ | ಎಂದು ಹೇಳಿದೆ.

ಸುಖಾಪೇಕ್ಷೆಯು ಪ್ರಾಣಿಮಾತ್ರಕ್ಕೆ ಸಹಜವಾದ ಗುಣ ; ಅದನ್ನು ಸಂಪೂರ್ಣವಾಗಿ ನಿಗ್ರಹಿಸುವುದು ಸಾಧ್ಯವೂ ಅಲ್ಲ, ಅವಶ್ಯವೂ ಅಲ್ಲ. ಹಾಗಾದ ಮೇಲೆ, ಅದಕ್ಕೆ ಉಪಕರಣವಾಗಿ ನಮ್ಮ ಪಾಲಿಗೆ ಬಂದ ಭೋಗ್ಯ ವಸ್ತುಗಳನ್ನು ಭೋಗಿಸದೆ ಬಿಡಬೇಕಾದುದೇಕೆ ? ಇದು ಉಮರನು ಕೇಳುವ ಪ್ರಶ್ನೆ, ಸುಖ ಸಂಪಾದನೆಗಾಗಿ ಅಕಾರ್ಯವನ್ನು ಮಾಡಬಹುದೆಂದು ಆತನು ಹೇಳಿಲ್ಲ. ಹೆಚ್ಚಿನ ಪ್ರಯಾಸವನ್ನಿಟ್ಟುಕೊಳ್ಳಬೇಡಿರೆಂದೇ ಆತನ ಉಪದೇಶ, ಆತನ ಭೋಗಸಾಮಗ್ರಿಯಲ್ಲಿ ಅಸಭ್ಯವಾದುದೆ ಒರಟಾದುದೂ ಯಾವುದೂ ಇಲ್ಲ. ಆತನ ಪಾನಕ ಲಘುವಾದ ದ್ರಾಕ್ಷಿಯ ರಸ; ಹುಚ್ಚು ಹುಟ್ಟಿಸುವ ಹೆಂಡವಲ್ಲ. ಆತನ ದೇಶದಲ್ಲಿ ದ್ರಾಕ್ಷಿಯು ನಮ್ಮ ದೇಶದಲ್ಲಿ ತೆಂಗಿನಮರದಂತೆ, ಅಥವಾ ಕಾಫಿಯಂತೆ, ಕಾವ್ಯಾಲಂಕಾರಕ್ಕಾಗಿ, ಒಂದು ಹಾಸ್ಯದ ಧ್ವನಿಯಲ್ಲಿ, ಅದನ್ನು ಆತನು ಕಳ್ಳೆಂದೂ ಮದ್ಯವೆಂದೂ ಉತ್ತೇಕ್ಷೆ ಮಾಡಿ ಪದೇ ಪದೇ ಕೊಂಡಾಡಿದ್ದಾನೆ ; ಅಷ್ಟೆ, ಜಗದ್ರಹಸ್ಯವು ಅಜೇಯವಾಗಿರುವ ವಿಷಯದಲ್ಲಿ ಕೊರತೆ, ಅತಿರ್ಕ ಕಠಿನವತಗಳ ವಿಷಯದಲ್ಲಿ ಹಾಸ್ಯ, ಬಹು ಪ್ರಯಾಸವಿಲ್ಲದೆ ಲಭ್ಯವಾಗುವ ಅಲ್ಪ ಸ್ವಲ್ಪ ಭೋಗಗಳಲ್ಲಿ ಸಂತೃಪ್ತಿ-ಇವು ಉಮರನ ಇಂಗಿತಾಂಶಗಳೆಂದು ನನ್ನ ಎಣಿಕೆ.

  1. ಇವುಗಳೊಡನೆ ಸೇರಬಹುದಾದ ಮಕ್ಕಳಾಟದ ನಗುವಿನ ಸುಖವನ್ನು ಉಮರನೇ ಮರೆತನೋ, ಅಥವಾ ಫಿಟ್ಸ್ಜೆರಲ್ಪನೆ ಅರಿಯುನೋ !