ಈ ಪುಟವನ್ನು ಪರಿಶೀಲಿಸಲಾಗಿದೆ
೪೫
ಉಮರನ ಒಸಗೆ
ಸಖನೆ, ನೀ೦ ಬಹುದಿನದ ಪಿಂತೆನ್ನ ಮನೆಯೊಳಗೆ
ಪೊಸ ಮದುವೆಯೌತಣಕೆ ಬಂದಿರ್ದೆಯಲ್ತೆ?
ಒಣ ಬಂಜೆ ತರ್ಕ ವನಿತೆಯನಂದು ನಾಂ ತೊರೆದು
ದ್ರಾಕ್ಷಿಯೆಂಬಳ ಸುತೆಯ ಮೆದುಗೈಯ ಪಿಡಿದೆಂ. ೩೫
ಅಸ್ತಿ ನಾಸ್ತಿಗಳೆಂಬ ತತ್ತ್ವಗಳ ಬಿತ್ತರಿಸಿ
ಮೇಲು ಬೀಳುಗಳೆಂಬ ನಿಯಮಗಳ ತೋರ್ಪಾ
ಕಲೆಯ ನಾಂ ಕಲಿತೊಡಂ, ತಳವನಾಂ ಮುಟ್ಟಿರ್ಪ
ಕಲೆಯೊಂದದಾವುದೆನೆ–ಮಧು ದೈವ ಭಜನೆ. ೩೬
ಮೊನ್ನೆ ಸಂಜೆಯಲಿ ಮಧುವಾಟಿಕೆಯ ಬಾಗಿಲಲಿ
ಗಂಧರ್ವನೊರ್ವನೆನ್ನೆಡೆಗೈದಿ ನಗುತೆ
ತೋಳಿನಲಿ ತಳೆದಿರ್ದ್ದ ಪಾತ್ರೆಯನ್ನು ತೋರುತ್ತ
ಕುಡಿಯೆಂದು ಬೆಸಸಿದನು; ಕುಡಿಯಲದು ಮಧುವು.೩೭