ಈ ಪುಟವನ್ನು ಪರಿಶೀಲಿಸಲಾಗಿದೆ
೪೪
ಉಮರನ ಒಸಗೆ
ಹಾ! ತುಂಬು ಬಟ್ಟಲನು. ಕಾಲವದು ತಾಂ ನುಣ್ಚಿ
ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ?
ನಿನ್ನೆ ಸತ್ತಿಹುದಿನ್ನು, ನಾಳೆ ಹುಟ್ಟದೆಯಿಹುದು;
ಇಂದು ಸೊಗವಿರಲವನು ನೆನೆದಳುವುದೇಕೆ? ೩೧
ಕವನದ ಸೋದೆಯ ನಾಮೀನಿಮಿಷ ಸವಿಯದಿರೆ
ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು;
ರವಿಶಶಿಗಳೊಡುತಿಹರೆಲ್ಲ ಶೂನ್ಯೋದಯಕೆ;
ಸಾಗುತಿಹರಕಟ! ಬಾ, ಸೊಗವಡುವ ಬೇಗ. ೩೨
ಏಸುದಿನ, ಹಾ! ಏಸುದಿನ ಕೊನೆಯ ಕಾಣದಿಹ
ಈ ಘಾಸಿ ಆತರ್ಕಗಳ ಬವಣೆ ನಮಗೆ?
ಕೈಗೆ ಸಿಲುಕದ ಕಹಿಯ ಫಲವನೇನರಸುವುದು,
ಮುದವ ಕಣ್ಗಿಂಬಾದ ದ್ರಾಕ್ಷಿ ಬೀರುತಿರೆ ? ೩೩