ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 29 -

ಯುವಕ:- “ಹೇಗೆ ಅನುಚಿತವಾಯಿತು?”

ಶೈಲಿನಿ:- “ನನ್ನ ತಂದೆಯು ನನ್ನೊಡನೆ ಮಾತನಾಡುವುದಕ್ಕೆ ಈಗಲೇ ಇಲ್ಲಿಗೆ ಬರುತ್ತಿರುವನು. ನಿನ್ನನ್ನು ನೋಡಿಬಿಟ್ಟರೆ, ನಮ್ಮ ಅವಸ್ಥೆ ಏನಾಗುವುದೋ ಎಂದು ಭಯವಾಗುತ್ತಿದೆ.”

ಯುವಕ:- "ರಜಪೂತ ಸ್ತ್ರೀಯು ಮರಣಕ್ಕೆ ಭೀತಳಾಗುವಳೇ? ಸಖೀ! ಶೈಲಿನಿ! ನಾನು ಮರಣಕ್ಕೆ ಸಿದ್ಧನಾಗಿರುವೆನು, ಆದರೆ ಸಾಯುವ ಮೊದಲು ನಿನ್ನೊಡನೆ ಎರಡು ಮಾತುಗಳನ್ನು ಕೇಳಬೇಕೆಂದಿರುವೆನು.”

ಯುವಕನು ಕಾಂಕ್ಷಿತಸ್ವರವನ್ನು ಕೇಳಿ ಶೈಲಿನಿಯು ಏನೋ ಯೋಚಿಸುತ್ತ ನಿಂತುಬಿಟ್ಟಳು. ತಂದೆಯು ತನ್ನನ್ನು ನೋಡಲು ಬರುವ ಸಮಯವು ಸಮೀಪಿಸಿತೆಂದು ತಿಳಿದು ಕಾತರಳಾದಳು. ಯುವಕನೊಡನೆ ಪ್ರಣಯ ಸಲ್ಲಾಪಕ್ಕೆ ಸಮಯವು ಅನುಚಿತವಾಯಿತೆಂದು ಕಾತರಳಾದಳು. ತಂದೆಯು ಇದುವರೆಗೆ ತನ್ನನ್ನು ನೋಡಲು ಬಾರದೆ ಇದ್ದುದರಿಂದ, ಇನ್ನೂ ಮೇಲೆ ಬರಲಾರನೆಂದು ಒಮ್ಮೆ ನಿಶ್ಚೈಸಿ ಶೈಲಿನಿಯು ಯುವಕನನ್ನು ಒಳಕ್ಕೆ ಬರುವಂತೆ ಕೈ ಸನ್ನೆ ಮಾಡಿದಳು. ಒಡನೆ ಶಿರೀಶಪುಷ್ಪ ಸದೃಶವಾದ ತನ್ನ ಹಸ್ತವನ್ನು ಹೋರನೀಡಿದಳು. ಯುವಕನು ಪಾಣಿಗ್ರಹಣ ಮಾಡಿ ಕೃತಕೃತ್ಯನಾದನು.

ಯುವಕನು ಶೈಲಿನಿಯ ಕೈಯನ್ನು ಬಿಗಿಹಿಡಿದು “ಪ್ರಿಯೆ ! ನನ್ನನ್ನು ಪ್ರೀತಿಸುವೆಯಾ?” ಎಂದು ಕೇಳಿದನು.

ಶೈಲಿನಿಯು ಎಲ್ಲಿಯೋ ಕಿವಿಗೊಟ್ಟ೦ತೆ ನೋಡುತ್ತ ಅಪ್ರತಿಭಳಾಗಿ ನಿಂತುಬಿಟ್ಟಳು.

ಯುವಕ:- “ಶೈಲಿನಿ! ನಿನ್ನ ಇಚ್ಛಿತ ವರನು ಯಾರು? ನಿನ್ನ ತ೦ದೆಯು ಯಾರನ್ನು ತುಚ್ಛೀಕರಿಸುವನು? ನನ್ನನ್ನೇ ?”

ಶೈಲಿನಿಯು ಏನು ಹೇಳಬೇಕೆಂದು ತಿಳಿಯಲಾರದೆ ಹೋದಳು. ಕೂಡಲೇ “ಶೈಲಿ! ಶೈಲಿ!” ಎಂದು ಕೆಳಗಿನಿಂದ ಯಾರೋ ಕೂಗಿ ಕರೆಯುವುದು ಕೇಳಿಸಿತು. ಶೈಲಿನಿಯು ಯುವಕನು ಕರಪಾಶದಿಂದ ಸಡಿಲಿಸುವುದಕ್ಕೆ ತವಕಗೊಂಡು, ಕೈಯನ್ನು ಹಿಂದೆ ಸೆಳೆದುಬಿಟ್ಟಳು. “ನನ್ನ ತಂದೆಯು ಈಗಲೇ ಮೇಲೆ ಬರುವನು. ಇನ್ನು ನಿಲ್ಲಬೇಡ” ಎಂದಳು. ಯುವಕನು “ತಂದೆ ಹೀಗಿಸುವುದು ನನ್ನನ್ನೇ?” ಎಂದು ಪುನಃ ಕೇಳಿದನು.