ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 31 -

ಸಂಕ್ಷೋಭಿತವಾದ ಸಮುದ್ರದ ಅಂತಸ್ಥಲದಿಂದ ನವೀನ ದ್ವೀಪಗಳ ಶಿರ್ಷೋದಯವಾಗುವಂತೆ, ಶಿವಾಜಿಯ ದೋರ್ದಂಡಪ್ರತಾಪದಿಂದ ಪ್ರಾಚೀನ ಹಿಂದೂರಾಜ್ಯಗಳ ಭಗ್ನಾವಶೇಷದ ಮೇಲಿಂದ ಮಹಾರಾಷ್ಟ್ರ ರಾಜ್ಯವು ತಲೆಯೆತ್ತುತ್ತಿಲಿತ್ತು. ಶೈಶವದಲ್ಲಿಯೇ ಅದರ ಗೋಣು ಮುರಿದು ಬಿಡುವುದಕ್ಕೆ ಅವರಂಗಜೀಬನು ಪೇಚಾಡಿದನು. ಅವರಂಗಜೀಬನ ಪೇಚಾಟವು ಬಯಲಾಯಿತು. ಆಪತ್ತು ವಿಪತ್ತುಗಳೆ ಶಿವಾಜಿಯ ಸಾಹಸರ್ಯಗಳಿಗೆ ಸಾಣೆಯ ಕಲ್ಲಾದುವು. ಕಷ್ಟ ಸಂಕಷ್ಟಗಳು ತಗಲಿದಷ್ಟಕ್ಕೆ ಮಹಾರಾಷ್ಟ್ರ ರಾಜ್ಯವು ಬಲವಾಗುತ್ತ, ಭೇರೂರುತ್ತ ಹೋಯಿತು. ಶಿವಾಜಿಯು ಮಕ್ಕಾವಿಗೆ ಹೋಗುವ ಮುಸಲ್ಮಾನ ಯಾತ್ರಿಕರನ್ನು ಸೂರೆಗೊಂಡನು. ಉರಿಯುವ ಗಡ್ಡದ ಇದಿರಿಗೆ ಹುಕ್ಕ ಹಿಡಿದಂತಾಯಿತು. ಕೋಪಾಕುಲಿತನಾದ ಅವರಂಗಜೀಬನು “ಪರ್ವತಮೂಷಕ"ವನ್ನು ಹಿಡಿಯುವುದಕ್ಕೆ ಮಹಾಸೇನೆಯೊಡನೆ ಜಯಸಿಂಹನನ್ನೂ ದಿಲೇರಿಖಾನನನ್ನೂ ದಕ್ಷಿಣ ಹಿಂದುಸ್ಥಾನಕ್ಕೆ ಕಳುಹಿಸಿದನು. ಪುರಂದರ ದುರ್ಗದಲ್ಲಿ ಮರಾಟರಿಗೂ ಮೊಗಲರಿಗೂ ಘೋರ ಯುದ್ಧ ನಡೆಯಿತು. ದೀರ್ಘದರ್ಶಿಯಾದ ಶಿವಾಜಿಯು ಏನೋ ಒಂದು ವಿಶೇಷ ಕಾರಣದಿಂದ ಮೊಗಲ್ ಸಮ್ರಾಟನೊಡನೆ ಸಂಧಿ ಮಾಡಿಕೊಳ್ಳುವುದು ಕ್ಷೇಮಕರವೆಂದು ಎಣಿಸಿ, ಜಯಸಿಂಹನಿಗೆ ಶರಣಾಗತನಾದನು. ಈ ಸಂಧಿಯ ಪ್ರಕಾರ ಅವರಂಗಜೀಬನು ಶಿವಾಜಿಗೆ ಡಿಲ್ಲಿಗೆ ಬರಬೇಕಾಗಿ ಆಹ್ವಾನ ಪತ್ರವನ್ನು ಬರೆದನು. ಶಿವಾಜಿಯು ತನ್ನ ಆಪ್ತರನ್ನೂ ಅಧಿಕಾರಿಗಳನ್ನೂ ೧,೦೦೦ ಮಂದಿ ಮಾವಳಿಗಳನ್ನೂ ೩,೦೦೦ ಮಂದಿ ರಾವುತರನ್ನೂ ಕೂಡಿಕೊಂಡು ತನ್ನ ಜ್ಯೇಷ್ಠ ಪುತ್ರನಾದ ಶಂಭಾಜಿಯೊಡನೆ ಮಹಾಸಂಭ್ರಮದಿಂದ ಢಿಲ್ಲಿಗೆ ಬಂದಿಳಿದಿದ್ದನು.

ಶಿವಾಜಿಯನ್ನು ಇದಿರುಗೊಳ್ಳುವುದಕ್ಕೆ ಅವರಂಗಜೀಬನು ಸ್ವತಃ ಹೋಗಲಿಲ್ಲ. ಅವನು ಜಯಸಿಂಹನ ಮಗನಾದ ರಾಮಸಿಂಹನನ್ನು ಕಳುಹಿಸಿದನೆಂದು ಇತಿಹಾಸವು ಹೇಳುವುದು. ಇದು ನಮಗೆ ತಪ್ಪಾಗಿ ತೋರುವುದು. ಸಂಶಯಾತ್ಮಕನಾದ ಅವರಂಗಜೀಬನು ಮಹಾಯೋಧನಾದ ಜಯಸಿಂಹನು ತನ್ನ ಸಿಂಹಾಸನದ ಬಳಿಯಲ್ಲಿರುವುದು ಲೇಸಲ್ಲವೆಂದು ತಿಳಿದು, ಅವನನ್ನು ದಖ್ಖಣಕ್ಕೆ ಕಳುಹಿಸಿದ್ದನು; ಮತ್ತು ಜಯಸಿಂಹನು ತನ್ನ ಮೇಲೆ