ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 34 -

ಹೊಂದಿದಳು? ಪ್ರಕೃತದಲ್ಲಿ ಅವರಂಗಜೀಬನ ಪತ್ನಿಯಾದ ಉದಿಪುರಿಯು ಹಗಲಿರುಳು ಕಣ್ಣೀರು ಮಿಡಿಯುವಳೇಕೆ? ಅವರಂಗಜೀಬನ ಚಿನ್ನದ ಕೊಳಕ್ಕೆ ಕೈಯೊಡ್ಡಿದ ನಮ್ಮ ಕುಲಕ್ಕೆ ಯಾವ ಯಶಸ್ಸು ಬಂದಿತು? ಆಪ್ಪಾ? ನಾನು ಯಥಾರ್ಥವಾಗಿ ಹೇಳುವೆನು, ನಾನು ಬಡ ಒಕ್ಕಲಿಗನ ಮನೆಯಲ್ಲಿ ಹುಟ್ಟಬಾರದಿತ್ತೇ? ನನಗೆ ಬೇಕಾದವನನ್ನು ವರಿಸಿ ಸುಖವಾಗುತ್ತಿದ್ದೆನು. ನಿನ್ನ ಉದರದಲ್ಲಿ ಜನಿಸಿ ಕಾಗೆಯನ್ನು ವರಿಸಬೇಕೇ?” ಎಂದಳು.

ರಾಜಸಿಂಹನು ಅಡಗಿಸಿದ ಸಿಟ್ಟಿಂದ “ಮುಅಜಮನಿಗಿಂತಲೂ ನಿನಗೆ ಯೋಗ್ಯನಾದ ವರನು ಮತ್ತೊಬ್ಬನಿಲ್ಲ. ಅವನ ಪಾಣಿಗ್ರಹಣವೇ ನಮ್ಮ ವಂಶೋದ್ಧರಣ. ಮಗು! ಕಂಡವರನ್ನು ಕೈ ಹಿಡಿದು ಕುಲವನ್ನು ಕಳಂಕಿಸಬೇಡ” ಎಂದು ಬಿರುಗಣ್ಣಿಂದ ನೋಡಿದನು.

ಶೈಲಿನಿಯು ಧೈರ್ಯಗೊಂಡು “ಅಪ್ಪಾ! ನಿನ್ನೊಡನೆ ಬಾಯಿಬಿಟ್ಟು ಹೇಳಿದರೆ, ಲಜ್ಜಾಹೀನಳೆಂದು ನೀನು ಭಾವಿಸುವುದಿಲ್ಲವಾದರೆ ನಾನು ಖಂಡಿತವಾಗಿ ಹೇಳುವೆನು; ಹಿಂದೂ ರಾಜಾಧಿರಾಜರನ್ನು ಬಿಟ್ಟು, ನಮ್ಮ ಸಂಸ್ಥಾನದ ಸ್ವಾತಂತ್ರ್ಯವನ್ನು ಮೊಗಲರಿಗೆ ಎಂದು ಬಲಿಕೊಟ್ಟೆವೋ ಆಗಲೇ ನಮ್ಮ ಕುಲವು ಕಳಂಕಿತವಾಗಿದೆ” ಎಂದಳು.

ರಾಜಸಿಂಹನು ಕೋಪವನ್ನು ತಡೆಯಲಾರದೆ ಎದ್ದು ನಿಂತನು; ಮಗಳ ಮಾರ್ನುಡಿಗೆ ಉತ್ತರಕೊಡಲಾರದೆ ನೀರವನಾದನು. ಒಂದು ನಿಮಿಷದ ಮೇಲೆ ಹಿಂದೂ ರಾಜಾಧಿರಾಜನು ಯಾರೆಂದು ಮಗಳೊಡನೆ ಗರ್ಜಿಸಿ ಕೇಳಿದನು. ಶೈಲಿನಿಯು ಮಂದಸ್ವರದಿಂದ, ಭವಾನಿಭಕ್ತನಾದ - ರಾಮದಾಸ ಶಿಷ್ಯನಾದ ಶಿವಾಜಿಯನ್ನು ಮುಕ್ತಕಂಠದಿಂದ ಹೊಗಳಿದಳು. ಶಿವಾಜಿಯು ವಿಶ್ವಾಸಘಾತುಕನಾದ, ಧರ್ಮದ್ರೋಹಿಯಾದ, ತುಂಡು ಪಾಳೆಯಗಾರನೆಂದು ತಂದೆಯು ತರ್ಕಿಸಿದನು. ಶೈಲಿನಿಯು ಅಲ್ಲಿಯೂ ಬಿಡದೆ, ಕುಲಸಂಹಾರಕನಾದ ಪಾಷಂಡನಾದ ಅವರಂಗಜೀಬನು ಹಿಂದುಗಳ ಅರಸನಲ್ಲವೆಂದೂ, ಶಿವಾಜಿಯೇ ಭಾರತವರ್ಷದ ಮಹಾರಾಜನೆಂದೂ ಬಿಗಿಹಿಡಿದು ಸಕಾರಣವಾಗಿ ತೋರಿಸಿದಳು. ಮಗಳ ಮಾತುಗಳಿಗೆ ಮರುಮಾತನಾಡದೆ ರಾಜಸಿಂಹನು ಕೆಳಕ್ಕೆ ಇಳಿದನು. ಇಳಿದು ಹೋಗುವಾಗ, ಮರಾಟನ ಮೂರ್ತಿಯು ಶೈಲಿನಿಯ ಹೃದಯಮಂದಿರದಲ್ಲಿ ಪ್ರತಿಷ್ಠಿತವಾಗಿರುವುದೆಂದು