ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 36 -

ಬಂದು ಎಲ್ಲರ ಮಾನಮರ್ಯಾದೆಗಳನ್ನು ಸ್ವೀಕರಿಸಿದನು. ಈಗಲೂ ಅವರಂಗಜೀಬನು ಬರಲಿಲ್ಲವೆಂದು ಮನಸ್ಸಿನಲ್ಲಿ ಸ್ವಲ್ಪ ಕುದಿದನು. ಶಿವಾಜಿಯೂ ರಾಜಸಿಂಹನೂ ಆಲಿಂಗನ ಮಾಡಿಕೊಂಡರು. ಆಲಿಂಗನ ಕಾಲದಲ್ಲಿ ರಾಜಸಿಂಹನ ಮುಖವು ಸ್ವಲ್ಪ ಭೀತಿವ್ಯಂಜಕವಾಗಿತ್ತು. ಶಿವಾಜಿಯು ರೇಷ್ಮೆಯ ಪಾಗುವನ್ನು ತಲೆಗೆ ಸುತ್ತಿಕೊಂಡು, ಅವರಂಗಜೀಬನು ಉಚಿತವಾಗಿ ಕಳುಹಿಸಿದ ಅಮೂಲ್ಯವಾದ “ಖಿಲಾತನ್ನು" ತೊಟ್ಟುಕೊಂಡು, ತನ್ನ ಸಹವಾಸಿಯಾದ ಭವಾನಿ ಎಂಬ ಕತ್ತಿಯನ್ನು ಸೊಂಟದಲ್ಲಿ ಬಿಗಿದುಕೊಂಡು, ತನ್ನ ಎಂಟು ವರ್ಷದ ಸಂಭಾಜಿಯೊಡನೆ ರಾಜಗಜವನ್ನೇರಿ ಹೊರಟನು; ಅಂಗರಕ್ಷೆ ಯವರು ಬಳಿ ಸಂದರು. ಆಪ್ತರೂ ಅನುಚರರೂ ಪಲ್ಲಕ್ಕಿಗಳನ್ನು ಹತ್ತಿದರು. ವಾದ್ಯಗಳ ನಿಸ್ವನ, ಜನಸ್ತೋಮದ ಚೀತ್ಕಾರ, ಅಶ್ವಗಳ ಹೇಷಧ್ವನಿ, ಮೊದಲಾದ ವಿವಿಧ ಕೋಹಲದಲ್ಲಿ ಶಿವಾಜಿಯು ತನ್ನ ಪ್ರಸ್ತಾನದ ಗೌರವಾರ್ಥವಾದ ತೋಪುಗಳ ಗುಡುಗನ್ನು ಕೇಳಲಿಲ್ಲ. ಶಿವಾಜಿಯು ಮನಸ್ಸಿನ ಖಿನ್ನತೆಯನ್ನು ಮುಖದಲ್ಲಿ ತೋರ್ಪಡಿಸದೆ, ಡಿಲ್ಲಿಯ ಪ್ರಾಚೀನ ವೈಭವವನ್ನು ಎಣಿಸುತ್ತ, ಗಜರೋಹಿಯಾಗಿ ಹೋದನು. ಜನಸಂದೋಹವು ನಗರದ ಹೆಬ್ಬಾಗಿಲನ್ನು ದಾಟಿ ಹೋಯಿತು. ಪ್ರಸ್ತರ ನಿರ್ಮಿತವಾದ, ಗಗನ ಚುಂಬಿಯಾದ, ನೂರಾರು ಮಿನಾರುಗಳು ಬುರುಜುಗಳು ಪ್ರಕಾಶವಾದುವು. ಲೋಕೋನ್ನತವಾದ ಕುತಬ್ಮಿನಾರಿನ ಶಿರಸ್ಸು ಸಮೀಪಸ್ಥವಾದಂತೆ ತೋರಿತು, ಜನಸಂದೋಹವು ಜುಮ್ಮಾಮಶೀದಿಯ ಬಳಿಯಿಂದ ಹರಿಯುತ್ತ ಮುಂದರಿಸಿತು. ಈ ಲೋಕೋತ್ತರನಾದ ಮಹಾರಾಷ್ಟ್ರ ವೀರನನ್ನು ನೋಡುವುದಕ್ಕೆ ಹಿಂದುಸ್ಥಾನದ ಜನರೆಲ್ಲರು ಅಸಂಖ್ಯಾತರಾಗಿ ನಗರದ್ವಾರವನ್ನು ಹಿಡಿದು, ಎರಡು ಬೀದಿಗಳಲ್ಲಿಯೂ ಸಂದಣಿಸಿದ್ದರು. ಆನೆಯು ರಾಜಮಂದಿರದ ಮುಂದುಗಡೆಯ ಚಾಂದಣಿ ಚೌಕಕ್ಕೆ ಬರುತ್ತಲೇ ಜನರ ನುಗ್ಗಾಟವು ಅಧಿಕವಾಯಿತು. ಚೌಕದಲ್ಲಿ ಪಹರೇ ಮಾಡುತ್ತಲಿದ್ದ ರಜಪೂತರು ಕುದುರೆಗಳನ್ನು ಹತ್ತಿ ಸಾಲಾಗಿ ನಿಂತುಬಿಟ್ಟರು. ಜ್ಯೋತಿಷ್ಯರು ತಮ್ಮ ಚಿತ್ರಾಸನಗಳನ್ನು ಬಿಟ್ಟು, ಗಜಾರೋಹಿಯಾದ ಶಿವಾಜಿಯನ್ನು ವಿಸ್ಮಿತ ದೃಷ್ಟಿಯಿಂದ ನೋಡುತ್ತಲಿದ್ಧರು. ವರ್ತಕರು, ವಾಣಿಜ್ಯರು, ವಿಪ್ರರು, ವೀಟಕಾಸ್ತ್ರೀಯರು, ವುಸ್ತಾದರು,