ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 38 -

ಅವರಂಗಜೀಬನು “ಆಮ್ ಖಾಸ್‌ಖಾನೆ"ಯಲ್ಲಿ (ಆಸ್ಥಾನಮಂದಿರ) ಸಿ೦ಹಾಸನಾರೂಢನಾಗಿದ್ದನು. ತನ್ನ ವೈಭವದಿಂದಲೂ ಮಹತ್ವದಿಂದಲೂ ಶಿವಾಜಿಯನ್ನು ಬೆರಗುಗೊಳಿಸಬೇಕೆಂದು ಬಾದಶಹನ “ಆಮ್ ಖಾಸ್‌ಖಾನೆ"ಯನ್ನು ಈ ದಿನ ಪರಿಷ್ಕಾರಗೊಳಿಸಿದ್ದನು. ಮಂದಿರದ ಆಕಾರವು ಪರಿಪಾಟಯಾಗಿತ್ತು. ಸುತ್ತಲ್ಲೆಲ್ಲಾ ಧನುಸ್ಸಿನ ಆಕೃತಿಯ ಅಲಂಕೃತವಾದ ಕಮಾನುಗಳು; ರೇಶ್ಮೆಯಿಂದ ಹೊದಿಸಿದ್ದ ಅಂತಸ್ತು; ಇದಕ್ಕೆ ಆಧಾರವಾಗಿ ನಿಂತ ಚಿನ್ನದ ವರಕಿನ ಕಂಬಗಳು; ಈ ಸ್ತಂಭಗಳಲ್ಲಿ ಚಿತ್ರಿತವಾದ ಕೃತಿಮ ಪುಷ್ಪಗಳು, ಲತೆಗಳು, ನಿಕುಂಜಗಳು, ಮಂದಿರದ ಉಭಯ ಪಾರ್ಶ್ವಗಳಲ್ಲಿ ಒಂದರ ಮೇಲೆ ಒಂದಾಗಿ ಉನ್ನತವಾದ ಮೂರು ವೇದಿಕೆಗಳು; ಸುವರ್ಣಕೃತವಾದ, ರಜತಮಯವಾದ, ಚಂದ್ರಕಾಂತನಿರ್ಮಿತವಾದ ಮೂರು ವೇದಿಕೆಗಳು, ಮಾಂಡಲಿಕರೂ ರಾಜಕುಲದವರೂ ಎತ್ತರವಾದ ವೇದಿಕೆಯನ್ನು ಏರಿದ್ದರು. ಮಿಕ್ಕವರೆಲ್ಲರು ಉಳಿದ ಎರಡು ಜಗುಲಿಗಳ ಮೇಲೆ ಪದವಿಗೆ ಅನುಸಾರವಾಗಿ ಕುಳಿತಿದ್ದರು. ಮುಂದಿರದ ಒಂದು ಭಾಗದಲ್ಲಿ “ಜಾರೂಕಾ" ಎಂಬ ವಿಶಾಲವಾದ ಕಿಟಕಿ; ದ್ವಾರಗಳೆಲ್ಲಿದ, ಕಟಾಂಜನವಿಲ್ಲದ ಕಿಟಕಿ. ಇಲ್ಲಿಯೇ ಮೊಗಲ್ ಚಕ್ರವರ್ತಿಗಳು ದಿನಂಪ್ರತಿ ಒಂದು ಸಲ ಬಂದು, ಪ್ರಜೆಗಳಿಗೆ ದೃಶ್ಯರಾಗುತ್ತಿದ್ದರು. “ಜಾರೂಕ"ದ ಹಿಂದೆ ಸ್ವಯಂ ಬಾದಶಹನು ವಿರಾಜಮಾನನಾಗಿದ್ದನು. ಜಾತಿ ಸುವರ್ಣ ನಿರ್ಮಿತವಾದ, ಅಮೂಲ್ಯ ನವರತ್ನ ಪ್ರೋಕ್ಷಿತವಾದ, ದ್ವಾದಶಕಾಂಚನಸ್ತಂಭಾಕೃತವಾದ ಮಯೂರಾಸನವನ್ನು ಮೊಗಲ್ ಚಕ್ರೇಶ್ವರನು ಆರೋಹಿಸಿದ್ದನು. ಅವರಂಗಜೀಬನು ತನ್ನ ಜೀವ ಕಾಲದಲ್ಲಿ ಮಯೂರ ಪೀಠವನ್ನು ಏರಿದ್ದು ಈ ಸಲವೇ. " ಶಿವಾಜಿಯು ಮಾಯಾವಿ” ಎಂದೆಣಿಸಿ, ಲೋಹಕವಚನ್ನೂ ಅಸ್ತ್ರಶಸ್ತ್ರಗಳನ್ನೂ ಕೊಟ್ಟು, ಮೈಗಾವಲನ್ನಿಟ್ಟುಕೊಂಡು ಸಿಂಹಾಸನದಲ್ಲಿ ಅವನು ಕುಳಿತಿದ್ದನು.” ಜನಸ್ತೊಮದಲ್ಲಿ ಶಿವಾಜಿ ಯಾರೆಂದು ಅವರಂಗಜೀಬನು ತನ್ನವರೊಡನೆ ಕೇಳಿದನು. ಸಮೀಪದಲ್ಲಿದ್ದ ರಜಪೂತ ಮಾಂಡಲಿಕನೊಬ್ಬನು ಕೈಜೋಡಿಸಿ ನಿಂತು, ಪ್ರತಿಭಾಮಯವಾದ ಮುಖವುಳ್ಳವನಾಗಿಯೂ, ಶುಕನಾಸನಾಗಿಯೂ, ಸ್ವಲ್ಪ ನೀಲವರ್ಣನಾಗಿಯೂ, ಆಜಾನುಬಾಹುವಾಗಿಯೂ, ಕುಬ್ಜನಾಗಿಯೂ ಇದ್ದು, ಗಂಭೀರಗತಿಯಿಂದ ಬರುತ್ತಿದ್ದ ಶಿವಾಜಿಯನ್ನು ತೋರಿಸಿದನು.