ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 43 -

ರೂಪವನ್ನು ಧರಿಸಿ ಬರುವಾಗ ಒಂದೆರಡು ನಕ್ಷತ್ರಗಳು ಆಕಾಶದಲ್ಲಿ ಕಣ್ಣು ಮಿಟುಕಿಸುತ್ತಿದ್ದುವು. ಆದರೂ ಶೈಲಿನಿಯು ಅಲ್ಲಿಯೇ ನಿಂತಿದ್ದಳು. ತಂದೆಯು ಬಾದಶಹನನ್ನು ಬೀಳ್ಕೊಂಡು ಮರಳಿ ಬಂದನು. ರಾಜಸಿಂಹನು ಮಗಳನ್ನು ನೋಡುವುದಕ್ಕೆ ಮಹಡಿಯನ್ನು ಹತ್ತಿದನು. ಶೈಲಿನಿಯು ಸುಮ್ಮನೆ ನಿಂತಿರುವುದನ್ನು ಕಂಡು, “ಮಗು! ಇನ್ನೂ ನಿದ್ದೆ ಹೋಗಲಿಲ್ಲವೇಕೆ?” ಎಂದು ರಾಜಸಿಂಹನು ಕೇಳಿದನು.

ಶೈಲಿನಿ:- “ಅಪ್ಪಾ ನೀನು ಬರಲಿಲ್ಲವೆಂದು ಕಾದಿದ್ದೆನು.”

ರಾಜಸಿಂಹ:- “ಮುಆಜಮನು ನನ್ನ ಸಂಗಡ ಬರುವನೆಂದು ನೀನು ತಿಳಿದೆಯಾ?"

ಶೈಲಿನಿ:- “ಮು- ಆಜಮನು ಈ ಮನೆಗೆ ಏಕೆ ತಾನೇ ಬರುವನು? ಇದು 'ಶರಾಬ್ ಖಾನೆ' ಅಲ್ಲವಲ್ಲಾ?”

ರಾಜಸಿಂಹನು ಹುಬ್ಬು ಗಂಟಿಕ್ಕಿ, “ಅಲ್ಲ! ಇದು ಶೈಲಿನಿ ಮಂದಿರ. ಇಲ್ಲಿಯೇ ಹೆಂಡತಿಯನ್ನು ನೋಡುವ ಹಾಗೆ ಅವನು ಬರಬೇಕೆಂದಿದ್ಧನು.”

ಶೈಲಿನಿ ಪ್ರತಿಯಾಗಿ, “ಅಪ್ಪಾ! ಕೆಂಡ ತಿಂದುನೋಡುವುದಕ್ಕೆ ಇದು 'ಶರಾಬ್ ಖಾನೆ' ಅಲ್ಲವೆಂದೇ ನಾನು ಹೇಳಿದೆನು.”

ರಾಜಸಿಂಹ:- “ಅಮ್ಮಾ! ಉದ್ದುರುಂಟು ಮಾತಾಡಬೇಡ! ಸುಮ್ಮನೆ ಹಟಹಿಡಿದು ಹುಚ್ಚಳಾಗಬೇಡ, ಕಂಡೆಯಾ?”

ಶೈಲಿನಿ:- “ಅಪ್ಪಾ! ಹಟ ಹಿಡಿಯುವವರೆಲ್ಲರೂ ಹುಚ್ಚರಾದರೆ, ಲೋಕದಲ್ಲಿ ಬುದ್ಧಿವಂತರು ಯಾರು ತಾನೇ ಇರುವರು?

ರಾಜಸಿಂಹ:- ಮಗು! ನಾನು ನಿನ್ನ ಅರ್ಥವನ್ನೆಲ್ಲಾ ತಿಳಿದಿರುವೆನು. ಆದರೆ ಒಂದು ಮಾತನ್ನು ಮರೆಯಬೇಡ- ಮರಾಟರು ಶೂದ್ರರು”.

ಶೈಲಿನಿ:- “ನಾನು ಅದಕ್ಕಿಂತಲೂ ಹೆಚ್ಚಾಗಿ ಬಲ್ಲೆನು. ಮುಸಲ್ಮಾನರು ಮ್ಲೇಚ್ಛರು”.

ರಾಜಸಿಂಹನು ಉಚ್ಚಸ್ವರದಿಂದ “ಮಗು, ಶೈಲಿನಿ! ನಾನು ನಿನ್ನನ್ನು ಯಾವಾಗ ಪ್ರತಾಪಗಡಕ್ಕೆ ಕೊಂಡು ಹೋದೆನೋ ಅಂದಿನಿಂದ ನೀನು ಹೀಗೆ ವರ್ತಿಸಲು ತೊಡಗಿದೆ. ಈಗ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ನಿನ್ನ ಹಣೆಯಲ್ಲಿ ಬರೆದಂತಾಗುವುದು. ಈ ನಿನ್ನ ನಡತೆಯು ನಿನಗೆ ಹಿತಕರವಲ್ಲ. ನೀನು ಅನ್ಯರ ಹಸ್ತಗತಳಾಗಿ, ನಿನ್ನೊಡನೆ ನನ್ನನ್ನೂ ನಮ್ಮ