ಪುಟ:ಐತಿಹಾಸಿಕ ಕಥಾವಳಿ-ಪಂಜೆ ಮಂಗೇಶರಾವ್.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

- 50 -

ತಿಳಿಸಿದ್ದನು. ಹಾಗೂ ಶಿವಾಜಿಯನ್ನು ಪ್ರೀತಿಸಿ, ಗುಪ್ತವೇಷದಿಂದ ಮರಾಟರ ಶಿಬಿರಕ್ಕೆ ಹೋಗುತ್ತಿದ್ದಳೆಂದು ಹೇಳಿದ್ದನು. ರಾಜಸಿಂಹನು ಕೋಪಾವಿಷ್ಟನಾಗಿ ಮಗಳನ್ನು ಅವಳ ಚಿಕ್ಕಮನೆಯಲ್ಲಿ ಮುಚ್ಚಿಟ್ಟನು. ಮಹಡಿಯ ಬಳಿಯಲ್ಲಿ ಬೆಳೆದಿದ್ದ ಮರವನ್ನು ಕಡಿದು ಹಾಕಿಸಿದನು. ಶೈಲಿನಿಯ ಸೆರೆಮನೆಯನ್ನು ಒಳಹೋಗಲು ಮುಜಮನಿಗಲ್ಲದೆ ಮತ್ತಾರಿಗಾದರೂ ಅಪ್ಪಣೆಯಿರಲಿಲ್ಲ. ಶೈಲಿನಿಯು ಇದುವರೆಗೆ ತನಗೆ ತೋರಿಸಿದ ಅಲಕ್ಷ್ಯಭಾವಕ್ಕೂ ಹಾಸ್ಯಕರವಾದ ಆಚರಣೆಗೂ ತಕ್ಕದಾದ ಶಾಸ್ತ್ರಿಯನ್ನು ಮಾಡಬೇಕೆಂದು, ಮುಆಜಮನು ಈ ರಾತ್ರಿ ಶೈಲಿನಿ ಇದ್ದಲ್ಲಿಗೆ ಬಂದಿದ್ದನು.

ಮುಆಜಮನು ಉಪ್ಪರಿಗೆಯನ್ನು ಹತ್ಯೆ, ಶೈಲಿನಿಯ ಮಂದಿರದ ಬಾಗಿಲನ್ನು ತೆರೆದು, ಒಳಕ್ಕೆ ಕಾಲಿಟ್ಟನು. ಅಚ್ಚರಿಗೊಂಡ ಕಣ್ಣುಗಳಿಂದ ಬಾಯಿಬಿಟ್ಟು ಅಪ್ರತಿಭನಾಗಿ ಅಲ್ಲಿಯೇ ನಿಂತು ನೋಡಿದನು. ಶೈಲಿನಿಯು ಓಡಿ ಹೋಗಿದ್ದಳು. ದುರ್ಜನರ ಅಶುದ್ಧಾಚರಣೆಯಿಂದ ಹಾಳಾದ ಊರಿಂದ ಪುರದೇವತೆಯು ತೊಲಗುವಂತೆ ಶೈಲಿನಿಯು ತನ್ನ ಮನೆಯಿಂದ ಓಡಿಹೋಗಿದ್ದಳು. ಕಣ್ಣೆರೆದು ಎಲ್ಲಾ ಕಡೆಗಳಲ್ಲಿ ನೋಡಿದನು. ದೀಪವನ್ನು ಕೈಯಲ್ಲಿ ಕೊಂಡು ಕೊಟ್ಟಡಿಯನ್ನೆಲ್ಲಾ ಹುಡುಕಿದನು- ಶೈಲಿನಿಯು ಅಲ್ಲಿಂದ ಮಾಯವಾಗಿದ್ದಳು. ಉನ್ನತವಾದ ಉಪ್ಪರಿಗೆಯಲ್ಲಿ ಬಂಧಿತಳಾದಳು ಅಲ್ಲಿಂದ ಹೇಗೆ ಜಾರಿಹೊದಳೆಂದು ನೋಡುವುದಕ್ಕೆ ಮುಆಜಮನು ಪ್ರಯಾಸಪಟ್ಟನು. ಶೈಲಿನಿಯು ಎರಡು ಪಟ್ಟೆಯ ಸೀರೆಗಳನ್ನು ಜೋಡಾಗಿ ಬಿಗಿದು, ಒಂದು ಕೊನೆಯನ್ನು ಕೊಟ್ಟಡಿಯ ತೊಲೆಗೆ ಸುತ್ತಿ, ಮತ್ತೊಂದನ್ನು ಕಿಟಕಿಯಿಂದ ಕೆಳಗೆ ಇಳಿಬಿಟ್ಟು, ಅದರ ಸಹಾಯದಿಂದ ಕೆಳಕ್ಕೆ ಇಳಿದು, ಎಲ್ಲಿಯೋ ಪಲಾಯನ ಮಾಡಿದಳು ಎಂದು ಮುಂಜಮನು ನಿಶ್ಚಯ ಮಾಡಿದನು. ಇನ್ನೂ ಕಾಲ ಕಳೆದರೆ ಕಾರ್ಯವು ಕೆಟ್ಟು ಹೋಗುವುದೆಂದು ತಿಳಿದು, ಅವಳನ್ನು ಹುಡುಕುವುದಕ್ಕೆ ಯೋಚಿಸಿದನು. ಶೈಲಿನಿಯು ಮರಾಟರ ಶಿಬಿರಕ್ಕೆ ಓಡಿ ಹೋಗಿರಬಹುದೆಂದು ಅವನು ನಿಶ್ಚಿಸಲಿಕ್ಕೆ ಕಾರಣವಿದ್ದಿತು. ಆದುದರಿಂದ ಅವಳನ್ನು ಹಿಡಿದು ತಂದು, ಅವಳ ತಂದೆಯ ವಶದಲ್ಲಿ ಕೊಟ್ಟು ಅವಳು ಮಾಡಿದ ದುಷ್ಕಾರ್ಯವನ್ನು ಅವಳ ಮುಖಕ್ಕೆ ಇಟ್ಟು, ತನ್ನ ಪರಾಕ್ರಮವನ್ನು ತೋರಿಸಬೇಕೆಂದು