ವಿಷಯಕ್ಕೆ ಹೋಗು

ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮುನ್ನುಡಿ ix

ಕಲ್ಪನೆಗಳು ಅವಿರ್ಭವಿಸುವುದು ಎಂಬುದೊಂದಿದೆ. ಕಲನಶಾಸ್ತ್ರವನ್ನು (calculus) ಮೊತ್ತಮೊದಲು ಆವಿಷ್ಕರಿಸಿದವನು ಆರ್ಕಿಮಿಡೀಸನೇ ಎಂದೂ ಆದರೆ ಅವನ ಕಾಲದಲ್ಲಿ ಅದರ ಪ್ರಯೋಜನಕ್ಕೆಡೆಯಿದ್ದಿಲ್ಲವಾಗಿ ಅದು ಮೂಲೆಗುಂಪಾಯಿತೆಂದೂ ಓದಿದ ನೆನಪಾಗುತ್ತದೆ. ಹಾಗಾಗಿ ಎರಡು ಸಾವಿರ ವರ್ಷಗಳ ಮೇಲೆ ನ್ಯೂಟನ್ ಅದನ್ನು ಪುನರಾವಿಷ್ಕರಿಸಬೇಕಾಯಿತು. ನ್ಯೂಟನ್ನನದು ಹೇಗೋ ಹಾಗೆ ಐನ್‌ಸ್ಟೈನರ ಭಾಗ್ಯವೂ ಅವರು ಇತಿಹಾಸದ ತಕ್ಕ ನಿಟ್ಟಿನಲ್ಲಿ ಹುಟ್ಟಿದರು ಎಂಬುದರಲ್ಲಿದೆ. ಇಬ್ಬರ ಮಹಿಮೆಯೂ ಒಂದೇ ಸ್ವಭಾವದ್ದು. ಅವರು ಮಹಾ ಪವಣಿಗರು. ಹಲದಶಕಗಳಿಂದ ಇತರರು ಕಲೆಹಾಕಿದ್ದ ತಥ್ಯಗಳನ್ನು ಏಕಸೂತ್ರದಲ್ಲಿ ಪವಣಿಸಿ ಅವರು ನಿಸರ್ಗದ ವರ್ತನೆಯನ್ನು ಅರ್ಥಪೂರ್ಣವಾಗಿ ಮಾಡಿ ತೋರಿಸಿದರು ; ಭಾರತೀಯ ಪರಿಭಾಷೆಯಲ್ಲಿ ಹೇಳುವುದಾದರೆ 'ಸತ್ಯ'ಗಳನ್ನು ಅಥವಾ `ತಥ್ಯ'ಗಳನ್ನು ಋತ'ದ ವ್ಯವಸ್ಥೆಗೆ ಒಳಪಡಿಸಿದರು. ಅಲೆಕ್ಸಾಂಡರ್ ಪೋಪ್ ಕವಿ “ದೇವನೆಂದನು ನ್ಯೂಟನ್ ಆಗಲಿ, ಒಡನೆ ಆಯ್ತು ಎಲ್ಲವು ಬೆಳಕು !” ಎಂದು ಹೇಳಿದಾಗ ಈ ಮಹತಿಯನ್ನೇ ಬಣ್ಣಿಸಿದ್ದ. ಕೊಪರ್ನಿಕಸ್, ಕೆಪ್ಲರ್, ಗೆಲಿಲಿಯೋ ಕಂಡದ್ದನ್ನೆಲ್ಲ ನ್ಯೂಟನ್ ಕಾಣೆಯಾಗಿ ಮಾರ್ಪಡಿಸಿದ್ದ,

ಈ ಮಾತು ನ್ಯೂಟನ್ನನಿಗೆ ಅನ್ವಯಿಸುವುದಕ್ಕಿಂತಲೂ ಹೆಚ್ಚಾಗಿ ಆಲ್ಬರ್ಟ್ ಐನ್‌ಸ್ಟೈನರಿಗೆ ಅನ್ವಯಿಸುತ್ತದೆ. ೧೯ನೇ ಶತಮಾನದ ಉದ್ದಾಮ ವಿಜ್ಞಾನಿಗಳು ಕಂಡುಹಿಡಿದ ತಥ್ಯಗಳು ನ್ಯೂಟನ್ ನಿರ್ಮಿಸಿದ 'ವಿಶ್ವ'ವನ್ನು ಕದಲಿಸಿ ಭೌತಶಾಸ್ತ್ರಪ್ರಪಂಚವನ್ನು ಗೊಂದಲದಲ್ಲಿ ಕೆಡಹಿದ್ದಾಗ ಐನ್‌ಸ್ಟೈನರು ಹೊಸದೊಂದು ಕಾಣೆಯ ಸೂತ್ರಕ್ಕೆ ವಿಶ್ವವನ್ನು ಒಳಪಡಿಸಿ 'ಅನರ್ಥಗಳಿಗೆ 'ಅರ್ಥ'ದಾನ ಮಾಡಿದರು. ಅವರ ವಿಶೇಷ ಸಾಪೇಕ್ಷತಾ ಸಿದ್ದಾಂತ ಮತ್ತು ಅನಂತರ ರೂಪಿಸಿದ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತವನ್ನು ಎಷ್ಟು ಮಟ್ಟಿಗೆ ವಿಜ್ಞಾನವೆಂದು ಹೇಳಬಹುದೋ ಅಷ್ಟೇಮಟ್ಟಿಗೆ 'ದರ್ಶನ'ವೆಂದೂ ಕರೆಯಬಹುದು. ಪದಾರ್ಥ ಮತ್ತು ಶಕ್ತಿಯನ್ನು, ಕಾಲ ಮತ್ತು ದೇಶ ವನ್ನು ಒಂದೇ ಮಹಾಋತ'ದ ಅಂಕೆಯಲ್ಲಿ ನೆಲೆಗೊಳಿಸಿದ ಅವರ ಕಾರ್ಯ ಕ್ವಾಂಟಮ್ ಭೌತಶಾಸ್ತ್ರದಿಂದ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರವೊದಗಿಸಿದ ಬಗೆಯನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತ್ರತವಾಗಿ ವಿವೇಚಿಸಿದ್ದಾರೆ.

ಐನ್‌ಸ್ಟೈನರ ಸಿದ್ಧಿಗಳು ಐಸಾಕ್ ನ್ಯೂಟನ್ನನವುಗಳಿಗೆ ಸರಿಮಿಗಿಲಾಗಿ ನಿಲ್ಲುವ ಬುದ್ಧಿ ವೈಭವವನ್ನು ಪ್ರದರ್ಶಿಸಿದ್ದರೂ ಈ ಇಬ್ಬರು ಮಹಾಪುರುಷರು ಎಷ್ಟು ಭಿನ್ನಸ್ವಭಾವಗಳವರಾಗಿದ್ದರೆಂಬುದು ಆಶ್ಚರ್ಯ ತರಿಸುತ್ತದೆ. ನ್ಯೂಟನ್ನನ ಬಾಲ್ಯಜೀವನ ಕೆಲಮಟ್ಟಿಗೆ ಐನ್‌ಸ್ಟೈನರದಕ್ಕಿಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಹಾಯ್ದು ಬಂದಿತ್ತು. ಆದರೆ ಅವನೆಂದೂ ದಡ್ಡ ವಿದ್ಯಾರ್ಥಿ ಎನಿಸಿಕೊಂಡಿರಲಿಲ್ಲ. ಜರ್ಮನ್ ಶಿಕ್ಷಣ ವ್ಯವಸ್ಥೆಯ ಕಬ್ಬಿಣದ ಚೌಕಟ್ಟಿನಲ್ಲಿ ಸಿಕ್ಕಿದ್ದ ಐನ್‌ಸ್ಟೈನರನ್ನು ಹದಿನಾಲ್ಕನೇ ವಯಸ್ಸಿನಲ್ಲಿ ಕೆಲಸಕ್ಕೆ ಬಾರದ ದಡ್ಡನೆಂದು ಅವರ ಶಾಲೆ ಅತ್ಯಂತ 'ಸಂತೋಷ'ದಿಂದ ಹೊರಗೆ ಹಾಕಿತ್ತು. ಬಾಲಕ ಐನ್‌ಸ್ಟೈನನಿಗೂ ಈ ಬಡತರ್ಫಿಯಿಂದ ಅಷ್ಟೇ ಸಂತೋಷವಾಗಿತ್ತು ! ಅದಾಗಿ ಹನ್ನೆರಡು ವರ್ಷಗಳೊಳಗೆ ಈ ದಡ್ಡ, ಜಗತ್ತನ್ನೇ ವಿಸ್ಮಯಗೊಳಿಸುವ ವಿಜ್ಞಾನಪ್ರಬಂಧವನ್ನು ಪ್ರಕಟಿಸಬಹುದೆಂದು ಯಾರು ಎಣಿಸಿದ್ದರು ! ವಾಸ್ತವಿಕವಾಗಿ ವಿದ್ಯಾರ್ಥಿದಶೆಯ ಉದ್ದಕ್ಕೂ ನಾಲಾಯಕ'ವೆಂಬ ಬಿರುದನ್ನೇ ಜರ್ಮನಿಯಲ್ಲಿಯೂ ಸ್ವಿಟ್ಸರ್ಲೆಂಡಿ ನಲ್ಲಿಯೂ ಗಳಿಸಿದವರು ಅವರು. ಮಹಾಪ್ರಯೋಗ ಪರೀಕ್ಷೆಗಳ ಯುಗದಲ್ಲಿ ಹುಟ್ಟಿದ ಅವರು ಪ್ರಯೋಗಶಾಲೆಗಳಲ್ಲಿ ಅತ್ಯಲ್ಪ ಕಾಲವನ್ನು ಕಳೆದವರೆಂಬುದು ಇನ್ನೊಂದು ಸೋಜಿಗ, ಅವರ ಮತಿ ಅತಿಸೂಕ್ಷ್ಮ ಮತ್ತು ಅತಿ ವಿಶಾಲ ವಿಷಯಗಳಲ್ಲಿ ಮಾತ್ರ ಗ್ರಹಣಶಕ್ತಿಯನ್ನು ತೋರಿಸು