ವಿಷಯಕ್ಕೆ ಹೋಗು

ಪುಟ:ಐನ್‌ಸ್ಟೀನ್ ಬಾಳಿದರಿಲ್ಲಿ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶ್ರೀಮಾನ್ ಎ. ಪಿ. ಶ್ರೀನಿವಾಸರಾಯರು ಪ್ರೌಢಶಾಲೆಯಲ್ಲಿ ನನಗೆ ವಿಜ್ಞಾನ ಕಲಿಸಿದ ಗುರುಗಳು (೧೯೩೯-೪೨), ವಿಜ್ಞಾನ ಪ್ರಪಂಚದಲ್ಲಿ ಕಾಣಬಹುದಾದ ಕಾರ್ಯ-ಕಾರಣ ಸಂಬಂಧವನ್ನು ಇವರು ಚಿತ್ರಿಸಿದ ನವುರು, ಪ್ರಯೋಗಗಳನ್ನು ಮಾಡಿ ತೋರಿಸುವುದರಲ್ಲಿ ಪ್ರದರ್ಶಿಸಿದ ನಾಜೂಕು ಮತ್ತು ಸಮಗ್ರವಾಗಿ, ವಿಜ್ಞಾನಬೋಧನೆಗೆಂದೇ ತಮ್ಮ ವ್ಯಕ್ತಿತ್ವವನ್ನು ನಿವೇದಿಸಿಕೊಂಡ ಸಮರ್ಪಣಭಾವ ನನ್ನ ತರುಣ ಮತ್ತು ದ್ಯುತಿಗ್ರಾಹಿ ಮನಸ್ಸಿನ ಮೇಲೆ ಅಚ್ಚಳಿಯದ ದಾಖಲೆ ಮೂಡಿಸಿವೆ.

ಪ್ರೊಫೆಸರ್ ಕೆ. ಎ. ಕೃಷ್ಣಮೂರ್ತಿಯವರು ಮತ್ತು ಪ್ರೊಫೆಸರ್ ಎಸ್. ನಾರಾಯಣ ಹೊಳ್ಳರು ನನಗೆ ಇಂಟರ್‌ಮೀಡಿಯೆಟ್ ತರಗತಿಗಳಲ್ಲಿ ಗಣಿತ ಮತ್ತು ಭೌತವಿಜ್ಞಾನ ಬೋಧಿಸಿದರು (೧೯೪೨-೪೪). ಮುಂದೆ, ನಾನು ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ (೧೯೪೭) ತರುವಾಯ, ನಾಲ್ಕು ವರ್ಷಗಳ ಕಾಲ, ೧೯೪೯ -೫೩, ಇವರ ಸಹೋದ್ಯೋಗಿ ಆಗಿದ್ದೆ. ನನ್ನ ವ್ಯಕ್ತಿತ್ವ ರೂಪುಗೊಳ್ಳುತ್ತಿದ್ದ ದಿನಗಳಂದು ಈ ಮಹನೀಯರ ಜೊತೆ ಒದಗಿದ ಆರು ವರ್ಷಗಳ ನಿಕಟ ಸಂಪರ್ಕ ಮತ್ತು ಸಹಯೋಗ ನನ್ನ ಅಭಿರುಚಿ ಆಸಕ್ತಿಗಳಿಗೆ ಖಚಿತ ರೂಪ ಮತ್ತು ಯುಕ್ತ ನಿರ್ದೇಶನ ನೀಡಿದುವು. ಗಣಿತದ ಎಂಥ ಸಂಕೀರ್ಣ ಪರಿಕಲ್ಪನೆಯೇ ಇರಲಿ ಯಾವ ಜಟಿಲ ಸಮಸ್ಯೆಯೇ ಎದುರಾಗಲಿ, ಕೃಷ್ಣಮೂರ್ತಿಯವರ ನಿಶಿತಮತಿಗೆ ಅದೊಂದು ಲೀಲಾವಿಹಾರ. ಅದರ ತಿರುಳನ್ನು ಅವರು ಒಡನೆ ಗ್ರಹಿಸಿ ಸ್ಪಷ್ಟವಾಗಿಯೂ ಸುಂದರವಾಗಿಯೂ ವಿವರಿಸುತ್ತಿದ್ದರು. ನಾರಾಯಣ ಹೊಳ್ಳರು ನ್ಯೂಕ್ಲಿಯರ್‌ ಯುಗ ಕ್ರಮಶಃ ಅನಾವರಣಗೊಳ್ಳುತ್ತಿದ್ದ ಆ ರೋಮಾಂಚಕಾರೀ ದಿನಗಳಂದು, ಭೌತ ಜಗತ್ತಿನ ಪ್ರಗಲ್ಬ ವಿದ್ಯಮಾನಗಳನ್ನು ಜಿಜ್ಞಾಸುವಿನ ಅನ್ವೇಷಕ ನೇತ್ರಗಳಿಂದ ಗ್ರಹಿಸಿ ಜೇಮ್ಸ್ ಜೀನ್ಸ್ ಅವರ ವಿನೂತನ ಧಾಟಿಯಲ್ಲಿ ಆಕರ್ಷಕವಾಗಿಯೂ ಸರ್ವಗ್ರಾಹ್ಯವಾಗಿಯೂ ವರ್ಣಿಸುತ್ತಿದ್ದರು. ಇವರುಗಳ ಜೇಯನಿಷ್ಠ ಸಂವಹನ ಸಾಮರ್ಥ್ಯ ನನ್ನ ಮೇಲೆ ವಿಶಿಷ್ಟ ಪ್ರಭಾವ ಬೀರಿದೆ.

ಐನ್‌ಸ್ಟೈನ್ ಬಾಳಿದರಿಲ್ಲಿ ಪುಸ್ತಕವನ್ನು ಈ ಗುರುತ್ರಯರಿಗೆ ಅರ್ಪಿಸುವುದರಲ್ಲಿ ವಿನೀತ ವಿದ್ಯಾರ್ಥಿಯೊಬ್ಬನ ಸಾಂಪ್ರದಾಯಿಕ ಕೃತಜ್ಞತಾಭಾವ ಪ್ರಕಟಣೆಗಿಂತ ಹೆಚ್ಚಿನ ಒಂದು ಪ್ರತೀಕಾರ್ಥ ಹುದುಗಿದೆ ಎಂದು ಭಾವಿಸಿದ್ದೇನೆ : ಇಂಥ ಗುರುಗಳು, ಅಡಿಗರ ನುಡಿಗಳಲ್ಲಿ, “ಮಣ್ಣಿನ ಮನದಲಿ ಹೊನ್ನನೆ ಬೆಳೆಯುವ ಅಪೂರ್ವ ತೇಜದ” ಮಾಂತ್ರಿಕರು.