ಪುಟ:ಕಂಬನಿ-ಗೌರಮ್ಮ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೨

"ಜೀವನದಲ್ಲಿ ಎಂದೂ ತನ್ನದೆಂಬ ಒಂದು ಬಿಡಿ ಕಾಸೂ ಇಲ್ಲದಿದ್ದ ಅವನಿಗೆ, ಅಷ್ಟರಿದಲೇ ತೃಪ್ತಿ-ಆನಂದ.

"ಮೊದಲೇ ಹೇಳಿದೆನಲ್ಲ-ಆ ವರ್ಷ ಅವನ ಕೆಲಸ ಬೇಗ ತೀರಿತ್ತೆಂದು. ತಮ್ಮ ಕೆಲಸ ತೀರಿದ ಮೇಲೆ ನೆರೆಹೊರೆಯವರ ಗದ್ದೆಗಳಿಗೆ ಹೋಗಿ ಸಹಾಯಮಾಡುವುದು ಹಳ್ಳಿಯ ಕಡೆಗೆ ವಾಡಿಕೆ. ಈಗವನು ಮೇಸ್ತ್ರಿಯಾದರೂ ಪದ್ಧತಿಯಂತೆ ಬೇರೆಯವರ ಗದ್ದೆಗಳಿಗೆ ಹೋಗಿ ಸಹಾಯ ಮಾಡುವ ರೂಢಿಯನ್ನು ತಪ್ಪಿಸಲಿಲ್ಲ. ಯಾವಾಗಲೂ ನಾಲ್ಕಾರು ಆಳುಗಳೊಡನೆ ನೆರೆಯವರ ಗದ್ದೆಗೆ ಹೋಗುತ್ತಿದ್ದ.

"ಜೋರಾಗಿ ಮಳೆ ಸುರಿಯುತ್ತಿದ್ದರೂ ನಡುಕವನ್ನು ಹುಟ್ಟಿಸುವ ಚಳಿ ಇದ್ದರೂ ತುಂಬ ಜನರೊಂದಾಗಿ ಗದ್ದೆಗಳಲ್ಲಿ ಕೆಲಸಮಾಡಲು ಒಂದು ತರದ ಉತ್ಸಾಹವಿದೆ. ಪದಗಳನ್ನು ಹಾಡಿಕೊಳ್ಳುತ್ತ, ಹರಟೆಕೊಚ್ಚು ಕೆಲಸ ಮಾಡುವಾಗ 'ದಣಿವೆಂದರೇನು ?' ಎಂಬುದೇ ಮರೆತು ಹೋಗುತ್ತೆ. ನಾಟಿಕೆಲಸ ಮತ್ತು ಕೊಯ್ಲು ಕೆಲಸಗಳ ಸಮಯದಲ್ಲಿ ಗದ್ದೆಗಳಲ್ಲಿ ಕೆಲಸಮಾಡಲು ಬೇಸರವಿಲ್ಲ. ಅವನಂತೂ ಎಂದೂ ಮೈಗಳ್ಳನಾಗಿ ಕೂತವನಲ್ಲ. ಕೆಲಸವೆಂದರೆ ಅವನಿಗೆ ಆಟ; ಅವನೊಡನೆ ಕೆಲಸವೆಡವದೆಂದರೆ ಇತರರಿಗೂ ಉತ್ಸಾಹ. ಗದ್ದೆಗಳಲ್ಲಿ ಗಂಡುಸರೂ ಹೆಂಗುಸರೂ ಒಂದುಗೂಡಿ ಕೆಲಸ ಮಾಡುತ್ತಿರುವೈದು ವಾಡಿಕೆ. ನಾಟಿ ಸಮಯದಲ್ಲಿ (ಸಸಿಗಳನ್ನು ನೆಡುವಾಗ) ಹೆಂಗುಸರು ಅಗೆ ತೆಗೆದು ಕಂತೆ ಕಟ್ಟುವರು. ಗಂಡುಸರು ಅವರು ತೆಗೆದ ಅಗೆಗಳನ್ನು ನೆಡುವರು. ಯಾರು ಹೆಚ್ಚು ಆಗೆ ತೆಗೆಯುವುದು, ಯಾರು ಹೆಚ್ಚು ನೆಡುವದು ಎಂದು ಪೈಪೋಟಿ ಬೇರೆ. ನಾಟಿ ನೆಡುವುದರಲ್ಲಿ ಅವನನ್ನು ಮೀರಿಸುವವರಿಲ್ಲ. ಆ ದಿನ ಅವನು ನೆಡುವಷ್ಟು ಚುರುಕಾಗಿ ಅವನಿಗೆ ಆಗೆ ಒದಗಿಸಿದ ಆ ಅವಳೇ ಅವನ ಜೀವನವನ್ನು ಸಂಪೂರ್ಣವಾಗಿ ಪರಿವರ್ತನಗೊಳಿಸಿದಾಕೆ. ಜಾತಿಯಿಂದವಳು ಮುಸಲ್ಮಾನನರವಳು.

"ಪ್ರೇಮಕ್ಕೆ ಜಾತಿ ಕುಲಗಳನ್ನು ಕಟ್ಟಿಕೊಂಡು ಮಾಡಬೇಕಾದುದೇನು? ಅದು ಕುರುಡು. ಅದರಲ್ಲಿ ನಿಜವಾದ ಪ್ರೇಮವಾದರೆ ಅದರ ಹಾದಿ ಎಂದೆಂದಿಗೂ ನಿಷ್ಕಂಟಕವಲ್ಲ.