ಪುಟ:ಕಂಬನಿ-ಗೌರಮ್ಮ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಮಳೆ ಬಿಸಿಲೆನ್ನದೆ ಸದಾ ದುಡಿತದಿಂದ ಬಣ್ಣ ಸ್ವಲ್ಪ ಕಪ್ಪಾದರೂ ಸೊಗಸಾದ ಮೈಕಟ್ಟು. ತುಂಬಿದ ಅಗಲವಾದ ಮುಖ. ಆ ಮುಖದಲ್ಲಿ ಹರಿಯುವ ನಗು. ನಗುವಿನಿಂದರಳಿದ ಕಣ್ಣುಗಳು, ಮತ್ತೆ ಆ ಕೆಲಸದಲ್ಲಿಯ ಉತ್ಸಾಹ-ಇದೆಲ್ಲವನ್ನೂ ನೋಡಿದವರು, 'ಯಾವ ಜಾತಿಯಲ್ಲಾದರೂ ಲತೀಫಾಳಂಥ ಹುಡುಗಿಯರು ಬಲು ಕಮ್ಮಿ' ಎಂದು ಒಪ್ಪಿಕೊಳ್ಳಬೇಕಾಗುವಂತಿದ್ದಳು....ಅವನ ಮನವನ್ನು ಕದ್ದ ಆ ಮುಸಲ್ಮಾನರ ಹುಡುಗಿ ಲತೀಫಾ.

“ಅದೇ ಅವರ ಮೊಟ್ಟ ಮೊದಲಿನ ಪರಿಚಯ. ಇಲ್ಲಿ ಇಷ್ಟು ಹೇಳಿದರೆ ಸಾಕು. ಅವರ ಪ್ರಣಯ ಹೇಗೆ ಮುಂದುವರಿಯಿತು ಎನ್ನುವ ಆವಶ್ಯಕತೆಯಿಲ್ಲ.

"ಅವನಿಗೆ ತನ್ನವರೆಂಬವರು ಯಾರೂ ಇಲ್ಲ. ಅವಳಿಗೆ ತಾಯಿ ಇದ್ದರೂ ಅವಳು ಇನ್ನೊಬ್ಬನನ್ನು ಮದುವೆಯಾಗಿದ್ದಳು. ಆ ಮದುವೆಯಿಂದ ಮಕ್ಕಳೂ ಇದ್ದರು. ಚಿಕ್ಕಪ್ಪನ ಮನೆಯಲ್ಲಿ ಇವಳ ಜೀವನವೇನೂ ಸುಖಮಯವಲ್ಲ. ಮತ್ತೆ ನೆರೆಹೊರೆಯ ಹೊಲಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಒಬ್ಬರನ್ನೊಬ್ಬರು ನೋಡುವುದೂ ಕಷ್ಟವಾದ ಮಾತಲ್ಲ. ಅಂತೂ ಆರೇಳು ತಿಂಗಳುಗಳಾಗುವಾಗ ಅವನು ಅವಳಿಗಾಗಿ ತನ್ನ ಜಾತಿಯನ್ನು ಬಿಡಲು ಸಹ ತಯಾರಾಗಿದ್ದ. ಅವಳು ! ಅವನಿಗಾಗಿ ತನ್ನ ಜೀವನವನ್ನೇ ಧಾರೆ ಎರೆಯಲು ಸಿದ್ದಳಾಗಿದ್ದಳು.

"ಆದರೆ ಈ ಲೋಕದಲ್ಲಿ ಈ ತೆರದ ಪ್ರೇಮಕ್ಕೆ ಎಡೆ ಎಲ್ಲಿ ? ಅವಳ ಚಿಕ್ಕಪ್ಪ ಒಂದು ದಿನ ಇವರಿಬ್ಬರು ಮಾತನಾಡುತ್ತಿರುವುದನ್ನು ನೋಡಿದ; ಅಂದೆ ಅವನಿಗೆ ಸಂಶಯುವಾಯ್ತು. ಬೇಗ ಲತೀಫಾಳ ಮದುವೆ ಮಾಡಿಬಿಡಬೇಕೆಂದು ಆಗಲೇ ನಿಶ್ಚಯಿಸಿದ. ಅವಳಂತಹ ಹುಡುಗಿಯರನ್ನು ಮದುವೆಯಾಗಲು ಯಾರು ತಾನೆ ಒಪ್ಪರು? ತನ್ನ ಹೆಂಡತಿಯನ್ನು ಒಂದು ತಿಂಗಳ ಹಿಂದೆ ಕಳೆದುಕೊಂಡ-ಮಕ್ಕಳೊಂದಿಗನಾದ ನೆರೆಮನೆಯ ಮುಸಲ್ಮಾನನೊಬ್ಬನು ತಯಾರಾಗಿಯೇ ಇದ್ದ. ಲತೀಫಾಳ ಚಿಕ್ಕಪ್ಪ ಅವನಿಂದ ನೂರು ರೂಪಾಯಿಗಳನ್ನು ಪಡೆದುಕೊಂಡು, ಅವನಿಗವಳನ್ನು

೯೩