ಪುಟ:ಕಂಬನಿ-ಗೌರಮ್ಮ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮದು ಬರೇ ಎಂಟು ತಿಂಗಳ ಗೆಳೆತನ-ಆದರೂ ನೀನು ನನಗೆ ಸ್ವಂತ ತಮ್ಮನಿಗಿಂತಲೂ ಹೆಚ್ಚಾಗಿ ಹೋಗಿದ್ದೆ. ನಾನು ಎಂದು ನಿನ್ನಲ್ಲಿ ಮುಚ್ಚು ಮರೆ ಮಾಡಿದವನಲ್ಲ. ನೀನೂ ನನ್ನಲ್ಲಿ ಅದೇ ತರದ ವಿಶ್ವಾಸವನ್ನಿಟ್ಟಿರುವೆ ಎಂಬ ಭಾವನೆ ಇತ್ತು ನನಗೆ.

ವಂಚನೆಯಿಂದ ನನ್ನ ಗೆಳೆತನ ಸಂಪಾದಿಸಬೇಕಾದ ಆವಶ್ಯಕತೆ ನಿನಗೇನಿತ್ತು ಮಹೇಶ? ಬಹುಶಃ 'ನನ್ನ ಸ್ವಂತ ಜೀವನ ನನ್ನದು. ಅದಕ್ಕೂ ನಮ್ಮ ಸ್ನೇಹಕ್ಕೂ ಸಂಬಂಧವೇನು?' ಎಂದು ನೀನು ಕೇಳಬಹುದು. ಒಂದು ತರದಿಂದ ನೋಡಿದರೆ ಸಂಬಂಧವೇನೂ ಇಲ್ಲ, ನಿಜ. ಹಾಗೆಣಿಸುವ ಸ್ನೇಹಿತರೂ ನಿನಗೆ ಬೇಕಾದಷ್ಟು ಜನ ಸಿಕ್ಕಬಹುದು. ಆದರೆ ನಮ್ಮ ಮನೆಯವನೊಬ್ಬ ಎಂಬಂತೆ ನನ್ನ ತಾಯಿ, ಅಕ್ಕ, ತಂಗಿಯರೊಡನೆ ನಿನ್ನನ್ನು ಒಡನಾಡಿಸಿದ ನನಗೆ ಅದು ಒಪ್ಪುವುದಿಲ್ಲ. ಸ್ನೇಹಿತನಾದವನಲ್ಲಿ ಪ್ರೇಮ, ಆದರ, ವಿಶ್ವಾಸ, ಗೌರವ ಎಲ್ಲಾ ಇಡುವಂತಿರಬೇಕು. ಇಷ್ಟರ ತನಕ ನಿನ್ನನ್ನು ಅದೇ ಭಾವನೆಯಿಂದ ನೋಡುತ್ತಲೂ ಇದ್ದೆ. ಆದರೆ ಈಗ ನೀನು ಸಾಮಾನ್ಯಳಾದ ನಟಿಯೊಬ್ಬಳೊಡನೆ ಬೀದಿ ಬೀದಿ ಅಲೆಯುವುದನ್ನು, ಅವಳ ಸಹವಾಸದಲ್ಲಿ ನೀನಿರುವುದನ್ನು ನೋಡಿದ ಮೇಲೂ ಆ ಭಾವನೆಗಳಿರಬೇಕೆಂದರೆ ಹೇಗೆ ಸಾಧ್ಯ? ನಿನ್ನೊಡನೆ ನನ್ನ ವ್ಯವಹಾರದಲ್ಲಿ ವ್ಯತ್ಯಾಸವನ್ನು ಕಂಡು ಬೆಳಗ್ಗೆಯೇ ನೀನು ಕಾರಣನನ್ನು ಕೇಳಿದೆ. ನಿನ್ನ ಮುಖ ನೋಡುತ್ತ ನಿನ್ನ ಆ ವೇದನೆಯಿಂದ ತುಂಬಿದ ಕಣ್ಣುಗಳನ್ನು ನೋಡುತ್ತ ನಾನು ಕಾರಣವನ್ನು ಹೇಳಲಾರದೆ ಹೋದೆ. ಅದರ ಸಲುವಾಗಿಯೇ ಈಗ ಬರೆಯಬೇಕಾಯಿತು.

ಮಹೇಶ, ಇದೇ ಊರವನಾದರೂ ನಿನ್ನೊಡನಿರುವ ಸಲುವಾಗಿ ಹಾಸ್ಟೆಲ್ ಸೇರಿದೆ. ನಾವಿಬ್ಬರೂ ಒಂದೇ ರೂಮಿನಲ್ಲಿದ್ದೆವು. ಕೇವಲ ಭಾವನೆಯೇ ಆದರೂ, ನೀನೊಬ್ಬ ಆದರ್ಶಸ್ನೇಹಿತ ಎಂಬ ಭಾವನೆ ಇತ್ತು ನನಗೆ. ಆಗ ನಿನ್ನೊಡನೆ ಕಳೆದ ಒಂದೊಂದು ನಿಮಿಷವೂ ಅಮೂಲ್ಯವಾಗಿತ್ತು. ಆದರೆ ಈಗ ಅದೇ ರೀತಿಯಿಂದಿರುವುದು ನಿನ್ನ ನಡುವಳಿಕೆಯನ್ನು ತಿಳಿದ ನನಗೆ ಅಸಾಧ್ಯ. ನಾನು ಇಂದೇ ನಮ್ಮನೆಗೆ ಹೊರಟು

೧೦೯