ಪುಟ:ಕಂಬನಿ-ಗೌರಮ್ಮ.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ಕಂಡ ಗೌರಮ್ಮನವರು

೧೧

ಮತ್ತೆ, 'ಹೋ' ಎನ್ನುತ್ತ ತಮ್ಮ ಪತಿ ಶ್ರೀ. ಗೋಪಾಲಕೃಷ್ಣರ (ಗೋಪಾಲಯ್ಯ ಎನ್ನುವುದೂ ಉಂಟು. ) ಕೈಹಿಡಿದುಕೊಂಡು ಬರುತ್ತಿರುವುದನ್ನು ಕಂಡೆ. ಎರಡೂ ಒಂದೇ ಬಗೆಯ ಬೆಳಕಿನ ಮಖ, ಒಂದೇ ನಗೆ. ಎರಡು ದೇಹ, ಒಂದೇ ಗಾತ್ರ-ಗತಿ. ಇಬ್ಬರೂ ಸಮನಾಗಿ ಹೆಜ್ಜೆ ಹಾಕುತ್ತ ಬರುತ್ತಿದ್ದರು. ಅವರು ನಡೆದು ಬರುತ್ತಿದ್ದ ಆ ನೋಟ 'ಅವರಿನ್ನೂ ದೂರದಿಂದ ಬರುತ್ತಿರಬೇಕು; ಇಲ್ಲವೇ ನಾನು ಹಿಂದೆ ಸರಿಯುತ್ತಿರಬೇಕು. ಅವರು ಹಾಗೇ ಬರುತ್ತಲೇ ಇರಬೇಕು. ನಾನು ನೋಡುತ್ತಲೇ ಇರಬೇಕು!' ಎನ್ನಿಸಿತು. ಎಂತಹ ಜೊತೆ ಅದು! ಸರ್ವಜ್ಞ ಕವಿ ಇಂತಹ ಒಂದು ದಾಂಪತ್ಯ ನೋಡಿಯೇ 'ಸ್ವರ್ಗಕ್ಕೆ ಕಿಚ್ಚು ಹಚ್ಚು' ಎಂದಿರಬೇಕು.

ನಾವು ಅಲ್ಲಿ ಕೂಡಿ ಆಡಿದ ಮಾತಿಗೆ ತುದಿಮೊದಲಿರಲಿಲ್ಲ. ಸಾಮಾನ್ಯವಾಗಿ ಸಾಹಿತ್ಯದ ಮಾತುಗಳೇ ಹೆಚ್ಚು. ನಾನು, ಪ್ರೊ. ಗೋಕಾಕರು ಇಂಗ್ಲೆಂಡಿನಿಂದ ಬಂದ ಮೇಲೆ ಧಾರವಾಡಕ್ಕೆ ಮೊದಲು ಬಂದಾಗಿನ ನಮ್ಮ ಉತ್ಸಾಹವನ್ನು ಹೇಳಿದೆ. ಅದನ್ನು ಕೇಳಿ ಅವರು "ಇನ್ನಿಷ್ಟು ಹೇಳಿ-ಇನ್ನಿಷ್ಟು!” ಎಂದರು. ಶ್ರೀ. ಬೇಂದ್ರೆ- ಮಾಸ್ತಿ ಎಂದರೆ ಅವರಿಗೆ ಬಹಳ ಭಕ್ತಿ. ಅವರನ್ನೊಮ್ಮೆ ಕೂಡಿಯೇ ತಮ್ಮ ಮನೆಗೆ ಕರೆಯಬೇಕೆನ್ನುತ್ತಿದ್ದರು. ಬೇಂದ್ರೆಯವರ,-'ರತ್ನ'ರ ಕವಿತೆಗಳು, ಮಾಸ್ತಿಯವರ ಕತೆಗಳು ಆಗಿನ ನಮ್ಮ ಮಾತಿನಲ್ಲಿ ಹಾಸುಹೊಕ್ಕಾಗಿದ್ದವು. ಏನಾದರೂ ಮಾತು ಬಂದಾಗ ಅದರೊಡನೆ ಒಂದು ಕವಿತೆಯ ನುಡಿಯೊ, ಕತೆಯು ಒಂದು ಮಾತ್ರ ಬರುತ್ತಲೇ ಇತ್ತು. ಈ ಮೊದಲು ವರ್ಣಿಸಿದ ಹಾಲಿನಲ್ಲಿ ಒಂದು ಸಣ್ಣ ಮೇಜಿನ ಮೇಲೆ Golden Treasury ಅದರೊಂದಿಗೆ 'ಶ್ರೀ' ಅವರ 'ಇಂಗ್ಲೀಷು ಗೀತೆಗಳು'; ಅಲ್ಲಿಯೇ 'ಉಮರನ ಒಸಗೆ'. ಒಂದು ಬದಿಗೆ ಓಓದಿ ಜೀರ್ಣವಾದ ಗರಿ-ಗರಿಯಾದ 'ಗರಿ'ಲೊಂದು. Golden Treasuryಯ ಹೊಟ್ಟೆಯಲ್ಲಿ ವಿ. ಸೀ. ಅವರ 'ಮನೆ ತುಂಬಿಸುವುದು' ಕವಿತೆಯದೊಂದು ಕಾಗದ ಇತ್ತು. ಇವುಗಳನ್ನಿಟ್ಟ ಚಿಕ್ಕ ಮೇಜಿಗೆ ಹೊದ್ದಿಸಿದ ಬಟ್ಟೆಯ ವರೆಗೆ-ಬುಡದಲ್ಲಿ,