ಪುಟ:ಕಂಬನಿ-ಗೌರಮ್ಮ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವನ ಆ ಕಾಲ್ಪನಿಕ ಇಂದುವು ಆದರ್ಶ ಸ್ತ್ರೀಯಾಗಿದ್ದಳು. ಸುಯೋಗ್ಯ ಗೃಹಿಣಿಯಾಗಲು ಬೇಕಾದ ಎಲ್ಲಾ ಸುಗುಣಗಳೊಡನೆ ಅವಳಿಗೆ ಅಪೂರ್ವ ಸೌಂದರ್ಯವೂ ಇತ್ತು. ಆದರೆ ಅದೇಕೋ ! ಇಷ್ಟೆಲ್ಲ ಸುಂದರವಾಗಿ ಚಿತ್ರಿಸಿದ ಆ ಇಂದುವಿನ ಮೊರೆಯಲ್ಲಿ ನಗುವಿಲ್ಲ-ಅವಳ ಕಣ್ಣುಗಳಲ್ಲಿ ಹಾಸ್ಯವಿಲ್ಲ. ಬಹುಶಃ ಯಾವಾಗಲೂ ನಗುನಗುತ್ತಿರುವ ವಾಣಿಯನ್ನು ನೋಡಿಕೊಂಡಿದ್ದುದರಿಂದಲೇನೋ ! ಅವಳಿಗಿಂತ ಎಲ್ಲಾ ತರದಲ್ಲ ಬೇರೆಯಾದ ಇಂದುವಿನ ಮುಖದಲ್ಲಿ ನಗುವಿರಬಾರದೆಂದು ಹಾಗೆ ಚಿತ್ರಿಸಿರಬಹುದು.

ಮೊದಮೊದಲು ಅವಳ ಕೆಲಸಗಳನ್ನು ಮೆಚ್ಚಿ, ಇಷ್ಟೊಂದು ಕಾರ್ಯಕುಶಲೆಯಾದ ಇಂದು ಹೇಗಿರಬಹುದು ಎಂದು ಒಂದು ತರದ ಕುತೂಹಲದಿಂದ ಇಂದುವಿನ ಚಿತ್ರವನ್ನು ಮನದೊಳಗೇ ಚಿತ್ರಿಸತೊಡಗಿದ್ದ ರತ್ನನಿಗೆ ಬರಬರುತ್ತ ಅವಳನ್ನು ಯಾವಾಗಲೂ ಚಿತ್ರಿಸುವುದೇ ಒಂದು ಹವ್ಯಾಸವಾಗಿ ಹೋಯ್ತು. ಒಮ್ಮೊಮ್ಮೆ ತುಂಬ ಕೆಲಸದ ಮಧ್ಯದಲ್ಲಿ ಅವನಿಗೆ ಇಂದುವಿನಯೋಚನೆ ಬಂದುಬಿಡುತ್ತಿತ್ತು. ತಾನು ಯತ್ನಿಸದಿದ್ದರೂ ತಾನಾಗಿ ಮಾಡುವ ಅವಳ ಯೋಚನೆ, ರೂಪಗಳಿಗಾಗಿ ಅವನಿಗೇ ಆಶ್ಚರ್ಯವಾಗುತ್ತಿತ್ತು. ಇದೆಂಥಾ ಭ್ರಾಂತಿ ! ಎಂದು ಸ್ವಲ್ಪ ಕೋಪವೂ ಬರುತ್ತಿತ್ತು. ಆದರಿದೆಲ್ಲಾ ವಾಣಿಯು ಪ್ರತಿಜ್ಞೆಗಳಂತೆ ಒಂದು ಸ್ವಲ್ಪ ಹೊತ್ತಿಗೆ ಮಾತ್ರವಷ್ಟೆ. ಇತರರ ಅಸಾಧ್ಯ ರೋಗಗಳನ್ನು ತನ್ನ ಔಷಧಿಗಳ ಬಲದಿಂದ ವಾಸಿಮಾಡುತ್ತಿದ್ದ ರತ್ನನಿಗೆ ಕೊನೆಕೊನೆಗೆ ಇಂದುವನ್ನು ಚಿತ್ರಿಸುವ ರೋಗದಿಂದ ಪಾರಾಗಲು ಅಸಾಧ್ಯವಾಗಿ ತೋರಿತು. ಏನೇನು ಮಾಡಿದರೂ ತನ್ನ ಮನೋರಾಜ್ಯದಿಂದ ಮಾಸದ ಇಂದುವಿನ ಕಾಲ್ಪನಿಕ ರೂಪವನ್ನು ಸಂಪೂರ್ಣವಾಗಿ ಉಜ್ಜಿಬಿಡಲು ಅವನಿಗೆ ಕೊನೆಗೆ ತೋರಿದ ಒಂದೇ ಒಂದು ಉಪಾಯವೆಂದರೆ ಅವಳನ್ನು ಪ್ರತ್ಯಕ್ಷವಾಗಿ ನೋಡಿಬಡುವುದು. ತಾನು ಚಿತ್ರಿಸಿದಷ್ಟು ಸುಂದರವಾಗಿರದ ಅವಳನ್ನು ಸ್ವತಃ ನೋಡಿದರೆ ತನ್ನ ಭ್ರಾಂತಿ ಮಾಸಬಹುದೆಂದು ಅವನಿಗೆ ತೋರಿತು.

೧೧