ಪುಟ:ಕಂಬನಿ-ಗೌರಮ್ಮ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ರಾತ್ರಿ ಹತ್ತು ಗಂಟೆಯಾಗಿತ್ತು. ರಾಜ ನೂರ ಒಂದನೆಯ ಸಲ ಸೀತೆಯ ಕಾಗದವನ್ನೋದುತ್ತಾ ಅವಳ ಚಿತ್ರದ ಮುಂದೆ ತನ್ನ ರೂಮಿನಲ್ಲಿ ಕೂತಿದ್ದ. ಕುಮಾರಿ ವಾಣಿಯ ಸಂಗೀತಕ್ಕೆ ಹೋಗಿದ್ದ ರತ್ನ ಇನ್ನೂ ಬಂದೇ ಇರಲಿಲ್ಲ. ಹತ್ತೂವರೆಗೆ ಸರಿಯಾಗಿ ರತ್ನ ಬಂದ. ರಾಜ ಇನ್ನೂ ಸೀತಾಧ್ಯಾನದಲ್ಲೇ ಇದ್ದ. ರತ್ನನ ಎಂದಿನಂತೆ ಹಾಸ್ಯಮಾಡದೆ ಸುಮ್ಮನೆ ಬಂದು ಒಂದು ಕುರ್ಚಿಯ ಮೇಲೆ ಕುಳಿತುಕೊಂಡ. ರತ್ನನನ್ನು ಕಂಡೊಡನೆ ರಾಜ ಸೀತೆಯ ಚಿತ್ರವನ್ನು ಮುಚ್ಚಿಟ್ಟು ಎದ್ದು ನಿಂತ. ರಾಜನಿಗೆ ವೇಳೆ ಹೋದುದು ತಿಳಿದಿರಲಿಲ್ಲ. ಗಡಿಯಾರವನ್ನು ನೋಡಿ 'ಇಷ್ಟೊತ್ತೆಲ್ಲಿಗೆ ಹೋಗಿದ್ದೆ ರತ್ನ?' ಎಂದ.

'ಆಗ್ಲೇ ಮರೆತು ಹೋಯ್ತೇನೋ-ಕುಮಾರಿ ವಾಣಿ ಸಂಗೀತ ಕೇಳೋದಕ್ಕೆ. ಈಗ್ತಾನೆ ಮುಗ್ತು-ಸೀದಾ ಬಂದೆ.'

'ಹೇಗತ್ತೋ ಸಂಗೀತ.'

'ಹಾಡಿದವಳು ವಾಣಿ ಕಣೋ.'

'ಮೈಸೂರವಳೇನೋ?'

'ಹೌದಂತೆ ಇನ್ನೂ ಚಿಕ್ಕ ಹುಡುಗಿ-ಹದ್ನೆಂಟು ವರ್ಷಕ್ಕೆ ಹೆಚ್ಚಿಲ್ಲ. ರೂಪು ರಾಗ ಎರಡಲ್ಲೂ ವಾಣೀನೇ ಅವಳು.'

'ಇದೇನೋ ಸನ್ಯಾಸಿ! ರೂಪು ರಾಗದ ವರ್ಣನೆಗೆ ಹೊರಟ್ಬಿಟ್ಯಲ್ಲಾ!'

'ಸನ್ಯಾಸಿಗೆ ಕಣ್ಣಿಲ್ಲಾಂತ ತಿಳ್ಕೊಂಡ್ಯ ನೀನು? ಇದ್ದಿದ್ದಿದ್ದಾಗೆ ಹೇಳಿದ್ರೆ ಸನ್ಯಾಸಕ್ಕೆ ಕೊರ್ತೆ ಏನೋ?'

'ಈಗಿಲ್ಲಾಂತನ್ನು-ಆದ್ರೆ ಸನ್ಯಾಸಿಗಳು ಸಂಗೀತಕ್ಕೂ ಸೌಂದರ್ಯಕ್ಕೂ ಮರುಳಾದ್ರೆ ಮುಂದ್ಗತಿ ?'

'ತಾ ಕೆಟ್ಟ ಕಪಿ, ವನವೆಲ್ಲಾ ಕೆಡ್ಸಿತು' ಎಂತ ಗಾದೆ ಇದೆಯಲ್ಲ ಹಾಗೆ-ನಿನ್ನ ಮಾತಿಗೆ ಕಿವಿಕೊಟ್ರೆ ಸರಿ-ನೀನು ಹೇಳ್ದಾಗೇ ಮುಂದ್ಗತಿ-ನಿನ್ನತ್ರ ಇದೇ ಮಾತು-ನಡಿ ಊಟಕ್ಕೋಗೋಣ.'