ಪುಟ:ಕಂಬನಿ-ಗೌರಮ್ಮ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಕಾಗಿ ಹೋಗಿತ್ತು. ಹೊರಗೆ ಹೋಗಿ ನಿಂತುಕೊಂಡ. ಅಷ್ಟರಲ್ಲಿ ರತ್ನ ಯಾರೋ ಇಬ್ಬರೊಡನೆ ಮಾತಾಡುತ್ತಾ ಅಲ್ಲೇ ನಿಂತಿದ್ದ ಒಂದು ಮೋಟಾರುಗಾಡಿಯ ಹತ್ತಿರ ಹೋದ. ರತ್ನ ನೊಡನೆ ಬಂದವರು ಕಾರಿಲ್ಲಿನ ಕುಳಿತರು. ರತ್ನ ತಲೆಯಮೇಲಿದ್ದ ಹೇಟನ್ನು ಕೈಯಲ್ಲಿ ಹಿಡಿದುಕೊಂಡು ಕಾರು ಕಣ್ಮರೆಯಾಗುವವರೆಗೂ ಅಲ್ಲಿಯೇ ನಿಂತಿದ್ದ. ರಾಜ ಹಿಂದಿನಿಂದ ಹೋಗಿ ಅವನ ಬೆನ್ನಿನ ಮೇಲೆ ಕೈಯಿಟ್ಟು 'ಯಾರೋ ಈಗ್ಹೋದೋರು?' ಎಂದ. ಬೆಚ್ಚಿಬಿದ್ದು ರತ್ನ 'ಯಾರು' ಎಂದ-'ನಾನು ಕೇಳೋದೂ ಅದೇ, ಯಾರೂಂತ?' ಎಂದ ರಾಜ.

'ಅವ್ರೇ-ನಿನ್ಗವ್ರನ್ನ ಗೊತ್ತಿಲ್ಲ-ಯಾರೂಂತನ್ಲಿ?'

'ಯಾರೂಂತ ಅಂದ್ರೆ ಹೇಗೆ ತಿಳಿಯೋದು-ಕುಮಾರಿ ವಾಣಿ ಅವಳ ಅಪ್ಪ ಎಂದ್ರೆ ಚೆನ್ನಾಗಿ ತಿಳಿಯೋತ್ತೆ' ಎನ್ನುತ್ತ ನಗುವನ್ನು ಸಹಿಸಿಕೊಂಡ ರಾಜ.

ರತ್ನ ಉತ್ತರಕೊಡಲಿಲ್ಲ.

'ನಿನ್ಗವರ ಪರಿಚಯ ಹೇಗಾಯ್ತೋ?'

ನಾರಾಯಣನಿಗೂ ಕುಮಾರಿ ವಾಣಿ ತಂದೆಗೂ ಗುರ್ತಿದೆ. ಅವನೇ ಮೊನ್ನೆ ಇಂಟರ್‌ಡ್ಯೂಸ್‌ಮಾಡ್ದ'-

'ಅದೇ ಮೊನ್ನೆ ರಾತ್ರಿ, ಸನ್ಯಾಸಿಗಳ ಸವಾರಿ ಬರೋಕ್ಕೆ ಅಷ್ಟೊತ್ತೋ? ಮುಚ್ಚುಮರೆ ಮಾಡೋದೂ ಸನ್ಯಾಸದ ಲಕ್ಷಣ ಅಂತ್ಕಾಣುತ್ತೆ ಅಲ್ವೇ ' ರತ್ನ ಜವಾಬು ಕೊಡಲಿಲ್ಲ. ರಾಜ ಗಟ್ಟಿಯಾಗಿ ನಗುತ್ತಾ 'ಬಂತು-ನಿನ್ನುಂಗ್ರಕ್ಕೆ ನನ್ನ ಹತ್ತಿರ ಬರೋಕಾಲ' ಎಂದ. ಅದಕ್ಕ ರತ್ನ ನಿರುತ್ತರ. ದಾರಿಯಲ್ಲಿ ಹೋಗುತ್ತಾ 'ರಾಜ, ಉಂಗ್ರ ನಿನ್ಗೆಸಿಕ್ಕೋಲ್ಲ' ಎಂದ ರತ್ನ. 'ಅದ್ಯಾಕಪ್ಪಾ?'

'ನಮ್ಮಂಥಾವ್ರನ್ನೆಲ್ಲಾ ವಾಣಿ ಮದ್ವೆ ಆಗ್ತಾಳೇನೋ! ನಾ ಮದ್ವೆ ಆದ್ರೆ ತಾನೆ ಸಿಕ್ಕೋದು ಉಂಗ್ರ ನಿನೆ?'

೨೯