ಕಥಾವಳಿ
_______
ಪ್ರ ಥ ಮ ಭಾ ಗ
_______
ಕಾಗಕ್ಕ ಗುಬ್ಬಕ್ಕ
ಒಂದು ಮರದ ಕೊಂಬೆಯ ಮೇಲೆ ಒಂದು ಕಾಗೆಯೂ, ಒಂದು ಗುಬ್ಬಿಯೂ ಹತ್ತಿರ ಹತ್ತಿರ ಗೂಡುಗಳನ್ನು ಕಟ್ಟಿಕೊಂಡು ಇದ್ದುವು, ಒಂದುದಿನ ಗುಬ್ಬಿಗೆ ಬಲು ಹಸಿವಾಗಿದ್ದಿತು. ಕಾಗೆಯ ಗೂಡಿನಿಂದ ಒಳ್ಳೆಯ ದೋಸೆಯ ವಾಸನೆ ಬಂದಿತು. ಆಗ ಗುಬ್ಬಿಯು, ಕಾಗೆಯ ಗೂಡಿನ ಹತ್ತಿರಕ್ಕೆ ಬಂದು,- ಕಾಗಕ್ಕಾ, ಕಾಗಕ್ಕಾ, ಸ್ವಲ್ಪ ಬಾಗಿಲು ತೆಗೆ- ಎಂದಿತು. ಕಾಗಕ್ಕನು ದೋಸೆಯನ್ನು ತಿನ್ನುತ್ತಾ- ನನ್ನ ಕೂಸಿಗೆ ನೀರು ಹಾಕುತಿದೇನೆ, ಸ್ವಲ್ಪ ತಾಳು- ಎಂದಿತು. ಒಂದು ಗಳಿಗೆ ಬಿಟ್ಟು ಗುಬ್ಬಿಯು-ಕಾಗಕ್ಕಾ, ಕಾಗಕ್ಕಾ, ಸ್ವಲ್ಪ ಬಾಗಿಲು ತೆಗೆಯೇ- ಎಂದು ಮತ್ತೆ ಕೂಗಿತು. ಆಗ ಕಾಗಕ್ಕನು-ನನ್ನ ಕೂಸನ್ನು ಮಲಗಿಸುತ್ತಿದೇನೆ, ತಾಳಮ್ಮ ಎಂದಿತು.
ಹಸಿವನ್ನು ತಡೆಯಲಾರದೆ ಗುಬ್ಬಿಯು ಹಾರಿಹೋಗಿ ಎಲ್ಲಿಂದಲೋ ಹತ್ತು ಕಡಲೆಕಾಳುಗಳನ್ನು ತಂದು ಗೂಡಿನಲ್ಲಿಟ್ಟು, ಬಾಗಿಲನ್ನು ಹಾಕಿಕೊಂಡು, ಒಳಗೆ ಕಟು೦, ಕುಟು೦, ಎಂದು ತಿನ್ನುತ್ತಿದ್ದಿತು. ಈ ಸದ್ದನ್ನು, ಕಾಗಕ್ಕನು ಕೇಳಿ, ಸಡಗರದಿಂದ ಬಂದು- ಎಲೆ ಗುಬ್ಬಕ್ಕಾ, ಗುಬ್ಬಕ್ಕಾ ! ಅದೇನೆ ಕಟು೦, ಕುಟುಂ, ಎಂದು ಅಷ್ಟು ಗಟ್ಟಿಯಾಗಿ ತಿನ್ನುತ್ತಿರುವುದು? ಬಾಗಿಲು ತೆಗೆಯೇ! ಎಂದಿತು. ಗುಬ್ಬಕ್ಕನು- ಅದು ಹುರಿಗಡಲೇ ಕಾಣೆ- ಎಂದು ಉತ್ತರವನ್ನು ಕೊಟ್ಟಿತು. ಕಾಗೆಯು ನನಗೊಂದೆರಡು ಕೊಟ್ಟೀಯೇನೆ ? ಎಂದು ಕೇಳಿತು. ಅದಕ್ಕೆ ಗುಬ್ಬಿಯು ಊ ! ನೀನು ದೋಸೆ ಕೊಟ್ಟಹಾಗೆ-ಎಂದಿತು.