146 ಕಥಾಸಂಗ್ರಹ-೪ ನೆಯ ಭಾಗ ಪ್ರಯೋಜನವೇನು? ಏನೂ ಇಲ್ಲ ವು. ಅದು ಕಾರಣ ಕುಂಭಕರ್ಣನ ವಿಷಯಕವಾದ ವ್ಯಸನವನ್ನು ಬಿಟ್ಟು ಈಗ ನಾನು ಹೇಳುವ ಮಾತುಗಳನ್ನು ಕೇಳು, ನಾನು ನಾಳಿನ ಉದಯ ಮುಖದಲ್ಲಿ ಶತ್ರುಸೈನ್ಯವನ್ನು ಪ್ರವೇಶಿಸಿ ರಾಮಲಕ್ಷ್ಮಣರ ಮಾಂಸಗ ಳಿಂದಲೂ ಸುಗ್ರೀವಾದಿ ಕಪಿಗಳ ಮಾಂಸಗಳಿಂದಲೂ ಔತಣವನ್ನು ಮಾಡಿಸಿ ಭೂತ ಪ್ರೇತಪಿಶಾಚಾದಿಗಳ ಬಳಗವನ್ನು ದಣಿಸದಿದ್ದರೆ ನಿನ್ನಿಂದ ಮಂಡೋದರಿಯಲ್ಲಿ ಹುಟ್ಟಿದ ಮಗನಲ್ಲ, ಈ ನನ್ನ ಪ್ರತಿಜ್ಞೆಯು ಸಾಗದಿದ್ದರೆ ಮಹಾಗ್ನಿ ಕುಂಡದಲ್ಲಿ ಬಿದ್ದು ಪ್ರಾ ಣಗಳನ್ನು ಕಳೆದು ಕೊಳ್ಳುವೆನು, ಮನಸ್ಸಿನ ದುಗುಡವನ್ನು ಬಿಡು. ನನಗೆ ಅಪ್ಪಣೆ ಯನ್ನು ಕೊಡು ಎಂದು ಹೇಳಿ--ನನ್ನ ಕದನಕ್ಕೆ ಇದೇ ಕಡೆಯೆಂದು ಭಾಷೆಯನ್ನಿತ್ತು ರಥಾರೂಢನಾಗಿ ರಿಪುಮಾರಣಮಂತ್ರಜ್ಞರಾದ ರಾಕ್ಷಸ ಪುರೋಹಿತರೊಡನೆ ಆ ರಾತ್ರಿ ಯಲ್ಲೇ ಹೊರಟು ಶೀಘ್ರವಾಗಿ ನಿಕುಂಭಿಳೆಗೆ ಬಂದು ಪ್ರಶಸ್ತ ಸ್ಥಾನದಲ್ಲಿ ಅಗ್ನಿಯನ್ನು ಪ್ರತಿಷ್ಠಿಸಿ ಆಸುರಹೋಮವನ್ನು ಮಾಡಲು ಜುಗಿಸಿ ಮಾಂಸದ ಚುರುವನ್ನೂ ರಕ್ತದ ಆಧಾರೆಗಳನ್ನೂ ನರದ ದರ್ಭೆಗಳನ್ನೂ ಬೆರಳ ಸಮಿತ್ತುಗಳನ್ನೂ ಮಂತ್ರ ಪೂರ್ವಕ ವಾಗಿ ಹೋಮ ಮಾಡಿ ಪೂರ್ಣಾಹುತಿಯನ್ನು ಕೊಡಲು ; ಆಗ ಸಂತುಷ್ಟ ನಾದ ಬ್ರಹ್ಮನು ಪ್ರತ್ಯಕ್ಷನಾಗಿ ಬಂದು ಇಂದ್ರಜಿತ್ತಿಗೆ ಬ್ರಹ್ಮಾಸ್ತ್ರವನ್ನು ಕೊಟ್ಟು ನಾಳಿನ ಕಾಳೆಗದಲ್ಲಿ ನಿನಗೆ ಜಯವಾಗುವುದೆಂದು ವರವನ್ನಿತ್ತು ಸತ್ಯಲೋಕವನ್ನು ಕುರಿತು ತೆರಳಿದನು. ಅನಂತರದಲ್ಲಿ ಇಂದ್ರಜಿತ್ತು ಅಗ್ನಿ ಕುಂಡದಿಂದ ಉತ್ಪನ್ನವಾದ ದಿವ್ಯ ರಥ ರಧಾಶ್ವ ಧನುರ್ಬಾಣಗಳನ್ನು ತೆಗೆದುಕೊಂಡು ಸಂತೋಷಯುಕ್ತನಾಗಿ ಅಲ್ಲಿಂದ ಹೊರಟು ತಂದೆಯ ಬಳಿಗೆ ಬಂದು ನಮಸ್ಕರಿಸಿ-ಎಲೈ ಜನಕನೇ, ಈ ವರೆಗೂ ನಿನ ಗಾಗಿರುವ ಅಪಜಯವೆಂಬ ಸಸಿಯನ್ನು ಕಿತ್ತು ರಾಮನ ಹೊಟ್ಟೆ ಎಂಬ ಗದ್ದೆಯಲ್ಲಿ ನೆಡುವೆನು. ಅದಕ್ಕೆ ಲಕ್ಷ್ಮಣನ ರಕ್ತ ವೆಂಬ ನೀರನ್ನು ಹೊಯ್ದು ಬೆಳಿಸುವೆನು. ಅದರ ಫಲವನ್ನು ಸುಗ್ರೀವಾದಿ ಕಪಿಗಳಿಗೆ ತಿನ್ನಿಸುವೆನು ಮತ್ತು ಈ ವರೆಗೂ ಸತ್ತು ಹೋಗಿ ರುವ ಕುಂಭಕರ್ಣನೇ ಮೊದಲಾದ ಸುಭಟರನ್ನು ಬದುಕಿಸಿ ಕರೆದು ಕೊಂಡು ಬಂದು ನಿನ್ನ ಓಲಗದ ಚಾವಡಿಯಲ್ಲಿ ನಿಲ್ಲಿಸುವೆನು, ಅದು ಸಾಧ್ಯವಲ್ಲ ದಿದ್ದರೆ ಯಮನ ಹೊಟ್ಟೆಯಲ್ಲಿ ಕಲ್ಕುಳ್ಳುಗಳನ್ನು ತುಂಬುವೆನು ಎಂದು ಹೇಳಿ ತಂದೆಯಾದ ರಾವಣ ನಿಂದ ವೀಳಯವನ್ನು ತೆಗೆದು ಕೊಂಡು ಅಲ್ಲಿಂದ ಹೊರಟು ಕ್ಷಣಕಾಲದಲ್ಲಿ ಚತುರಂಗ ಬಲಸಮೇತನಾಗಿ ಯುದ್ಧ ಭೂಮಿಗೆ ಬಂದು ನಿಂತನು. ಆ ಕೂಡಲೆ ಕಪಿಸೈನ್ಯದಲ್ಲಿ ಕಪಿವೀರರ ಕಣ್ಣುಗಳು ತೂಕಡಿಕೆಯಿಂದ ಜೋಂಪಿಸಿದುವು. ಕೈಗಳಲ್ಲಿದ್ದ ಗಿರಿತರುಗಳು ಜಾರಿ ಕೆಳಗೆ ಬಿದ್ದುವು, ಸುಗ್ರೀವಾದಿ ನಾಯಕರ ಎದೆಯು ಕಂಪಿಸಿತು. ರಾಮಲ ಕೃಣರ ವಾಮಭುಜಗಳು ನಡುಗಿದುವು. - ಶ್ರೀರಾಮನು ಆ ವೇಳೆಯಲ್ಲಾದ ಅಪಶಕುನಪರಂಪರೆಗಳನ್ನು ನೋಡಿ ಮನಸ್ಸಿನಲ್ಲಿ ವ್ಯಸನವುಳ್ಳವನಾಗಿ ಜಾಂಬವಂತನನ್ನು ಕುರಿತು--ಏನೈ ಸೇನಾಪತಿಯೇ, ಈ ದಿವಸದಲ್ಲಿ ಇಂಥಾ ಭಯಂಕರವಾದ ಉತ್ಪಾತಗಳು ಉಂಟಾಗುತ್ತಿವೆಯಲ್ಲಾ! ನೀನು ಮುಂದಣ ಲೇಸು ಹೊಲ್ಲೆಹಗಳನ್ನು ಕುರಿತು ಏನು ಯೋಚಿಸುತ್ತಿರುವಿ ? ಎಂದು ಕೇಳಲು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೬
ಗೋಚರ