ವಿಷಯಕ್ಕೆ ಹೋಗು

ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾಹಾವತಾರದ ಕಥೆ 227 ನಾಕ್ರಾಂತನಾಗಿ ವರುಣನನ್ನು ಕುರಿತು-ನೀನು ಬಲುಮುದುಕನಾಗಿದ್ದೀಯೆ. ಈ ಲೋಕದಲ್ಲಿ ನನ್ನೊಡನೆ ನಿಂತು ಕಾದುವ ಪರಾಕ್ರಮಶಾಲಿಗಳು ಎಲ್ಲಾದರೂ ಯಾರಾ ದರೂ ಇದ್ದರೆ ಬೇಗ ಹೇಳು ಎಂದನು. ಅದಕ್ಕೆ ವರುಣನು ಸ್ವಲ್ಪ ಯೋಚಿಸಿ-ಎಲೈ ದೈತ್ಯರಾಜನೇ, ನೀನು ಮೊದಲು ತೆಗೆದು ಕೊಂಡು ಹೋಗಿ ರಸಾತಲದಲ್ಲಿ ಹಾಕಿದ ಭೂಮಿಯನ್ನು ತನ್ನ ಕೋರೆದಾಡೆಗಳ ಮೇಲೆ ಇರಿಸಿ ತೆಗೆದು ಕೊಂಡು ಒಬ್ಬ ವರಾಹ ರಾಜನು ಹೋಗುತ್ತಾ ಇದ್ದಾನೆ, ಒಂದು ವೇಳೆ ಅವನೇನಾದರೂ ನಿನ್ನೊಡನೆ ಯು ದ್ದಕ್ಕೆ ನಿಂತರೂ ನಿಲ್ಲಬಹುದು, ಅವನೂ ನಿಲ್ಲದೆಹೋದರೆ ಇನ್ನಾರನ್ನೂ ಕಾಣೆನು ಎಂದು ಹೇಳಿದನು. ಆ ಮಾತನ್ನು ಕೇಳಿ ಹಿರಣ್ಯಾಕ್ಷನು ಮಹಾ ಕೋಪದಿಂದ ಮುಂಗಾಣದ ವನಾಗಿ ಹೊರಟು ಭೂತಳವನ್ನು ಎತ್ತಿ ಕೊಂಡು ಹೋಗುತ್ತಿರುವ ವರಾಹಪತಿಯನ್ನು ಕಂಡು ಅಬ್ಬರಿಸಿ ಓಡಿಬಂದು ಎದುರಾಗಿ ನಿಂತು ತನ್ನವರನ್ನು ಕುರಿತು-ಎಲೆ, ಎಲೇ, ಹಂದಿ ! ಹಂದಿ ! ಮಜಭಾಪು ! ಮೊದಲು ನಾವು ತಂದುಹಾಕಿದ ಭೂಮಿಯನ್ನು ಎತ್ತಿ ಕೊಂಡು ಹೋಗುತ್ತಿದೆ. ಹಿಡಿಯಿರಿ ! ಹಿಡಿಯಿರಿ ! ಹೊಡಿಯಿರಿ ! ಹೊಡಿಯಿರಿ ! ಹಿಂದಟ್ಟಿಹೋಗಿ ಬಡಿಯಿರಿ ! ತಡಮಾಡಬೇಡಿರಿ ! ಬಲೆಗಳನ್ನು ಹಾಕಿರಿ ! ಕೆಡಹಿರಿ ! ಹಾಸುಗಳನ್ನು ಕಳಚಿ ನಾಯಿಗಳನ್ನು ಬಿಡಿರಿ ! ಇದು ನಮಗೆ ಇಂದಿನ ಆಹಾರಕ್ಕೆ ಸಾಕಾಗುವುದು, ಇದನ್ನು ಈ ಕ್ಷಣದಲ್ಲೇ ಕೊಲ್ಲದೆ ಬಿಡೆನೆಂದು ವರಾಹನೆದುರಿಗೆ ಬಂದು ನಿಂತು ಅದನ್ನು ಕುರಿತು-ಎಲಾ, ಕೊಬ್ಬಿದ ಹಂದಿಯೇ, ನಿನಗೀ ಬೊಬ್ಬೆ ಗಿಬ್ಬೆಗಳೇಕೆ ? ಮಾರಿಯ ಹಬ್ಬದಲ್ಲಿ ತಲೆಗೊಡುವ ಸೂಕರನೇ ನನ್ನೊಡನೆ ನಿನ್ನ ಮೈ ಗೊಬ್ಬನ್ನು ತೋರಿಸೇಳು ! ನಿನ್ನ ಬಲದ ಕೊಬ್ಬನ್ನು ನೆಗ್ಗು ವೆನು, ನಿನ್ನ ಖಂಡವನ್ನು ತುಪ್ಪದಲ್ಲಿ ಹುರಿದು ತಿಂದು ತೇಗುವೆನು, ನಿನ್ನ ರಕ್ತವನ್ನು ಕುಡಿದು ಸಂತೋಷಿಸು ವೆನು ಅರಸುತ್ತಿರುವ ಬಳ್ಳಿಯು ಕಾಲೊಡರಿಕೊಂಡಂತೆ ರಕ್ತ ಮಾಂಸಗಳಿ೦ದ ಕೊಬ್ಬಿದ ನೀನೇ ನನಗೆ ಸಿಕ್ಕಿದುದು ಬಲು ಚೆನ್ನಾ ಯಿತು. ನಿಮೇಷಮಾತ್ರದಲ್ಲಿ ನಿನ್ನ ಆಸುಗಳನ್ನು ಹೊರಡಿಸಿ ಹಸನಾದ ಬಿಸಿಬಿಸಿ ನೆತ್ತಿರನ್ನು ಕುಡಿದು ತೃಪ್ತಿಯನ್ನು ಹೊಂದುವೆನು. ಇದೋ, ಇದನ್ನು ಸಹಿಸಿಕೊ ಎಂದು ತನ್ನ ತೋರವಾದ ಮಹಾ ಗದೆಯಿಂದ ವರಾಹವನ್ನು ಹೊಯ್ದನು, ಆಗಲಾ ಹಂದಿಯು ಕೆಲಕ್ಕೆ ಹಾರಿ ಆ ಮಹಾಘಾತವನ್ನು ತಪ್ಪಿಸಿಕೊಂಡು ತನ್ನ ಕೋರೆದಾಡೆಗಳ ಮೇಲಿದ್ದ ಭೂಮಿಯನ್ನು ಮಹಾಶೇಷನ ಹೆಡೆಯ ಮೇಲೂ ದಿಗ್ಗಜಗಳ ಮೇಲೂ ಇಟ್ಟು ಈ ರಕ್ಕಸನ ಬೊಬ್ದಾ ಟವು ಬಲುವಾಗಿದೆ. ಇವನ ಉಕ್ಕನ್ನು ತಗ್ಗಿಸುವೆನು ಎಂದು ಸಿಡಿದು ಮೇಲಕ್ಕೆ ನೆಗೆದು ಹಾರಿ ಬಂದು ದೈತ್ಯನ ಹಲ್ಲುಗಳು ಮುರಿಯುವಂತೆ ಹೊಕ್ಕು ಹೊಯ್ಯಲು ; ಅದನ್ನು ಕಂಡು ದಾನವನು ತಪ್ಪಿಸಿಕೊಂಡು ತನ್ನ ಕೈಯಲ್ಲಿದ್ದ ಗದೆಯಿಂದ ವರಾಹನ ಕೈಯಲ್ಲಿದ್ದ ಗದೆಯನ್ನು ಹೊಯ್ಯಲು ; ಆ ಗದೆಯು ಮಹಾವರಾಹನ ಕೈಯಿಂದ ಕಳಚಿ ಕೆಳಗೆ ಬಿದ್ದಿತು. ಆ ವೇಳೆಯಲ್ಲಿ ದಿತಿಸುತನು ಮತ್ತೂ ಮಹಾ ಕೋಪವೇಗಯುಕ್ತನಾಗಿ ಬಹು ವಿಧಾಯುಧಗಳಿಂದ ವರಾಹನನ್ನು ಪ್ರಹರಿಸಿ ಮಾಯೆಯನ್ನವಲಂಬಿಸಿ ಮಿಂಚಾಗಿ