೭೩
೧. ಗರತಿ ಹಾಡುಗಳು
ತಾವರಿಯ ಗಿಡ ಹುಟ್ಟಿ ದೇವರಿಗೆ ನೆರಳಾದಿ
ನಾ ಹುಟ್ಟಿ ಮನಿಗೆ ಎರವಾದೆ । ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ
ಬ್ಯಾಸಗಿ ದಿವಸಕ ಬೇವಿನ ಮರ ತಂಪ
ಭೀಮರತಿಯೆಂಬ ಹೋಳಿ ತಂಪ । ಹಡೆದಮ್ಮ
ನೀ ತಂಪ ನನ್ನ ತವರೀಗಿ
ಹೆಣ್ಣು ಹಡೆಯಲಿ ಬ್ಯಾಡ ಹೆರವರಿಗಿ ಕೊಡಬ್ಯಾಡ
ಹೆಣ್ಣು ಹೋಗಾಗ ಅಳಬ್ಯಾಡ । ಹಡೆದವ್ವ
ಸಿಟ್ಟಾಗಿ ಶಿವಗ ಬೈಬ್ಯಾಡ
ತಾಯಿ ಮಕ್ಕಳ ದನಿಯು ತಾಳ ಬಾರಿಸಿದಾಗ
ಜೋಡ ಕಿನ್ನೂರಿ ನುಡಿದಾಂಗ । ಹಲಸಂಗಿ
ಹೊತ್ತೇರಿ ತಾಸೆ ಬಡೆದಾಂಗ
ತಾಯಿ ಕಾಣದ ಜೀವ ತಾವೂರಿ ಬಾವೂರಿ
ಭಾಳ ಬಿಸಲಾನ ಅವರೀಯ । ಹೂವಿನ್ಹಾಂಗ
ಬಾಡತೀನಿ ತಾಯಿ ಕರೆದೊಯ್ಯ
ಗಂಜೀಯ ಕುಡಿದರು ಗಂಡನ ಮನಿ ಲೇಸ
ಅ೦ದಣದ ಮ್ಯಾಲ ಚವುರವ । ಸಾರಿದರ
ಹಂಗಿನ ತವರ ಮನಿ ಸಾಕ
ತಾಯಿಲ್ದ ತವರೀಗಿ ಹೋಗದಿರು ನನ ಮನವ
ನೀರಿಲ್ದ ಕೆರಿಗಿ ಕರ ಬಂದು । ತಿರುಗಾಗ
ಆಗ ನೋಡದರ ದುಃಖಗಳ
ಅಡಗೀಯ ಮನಿಯಾಗ ಮಡದೀಯ ಸುಳುವಿಲ್ಲ
ಅಡಗಿ ಬಾಯಿಗೆ ರುಚಿಯಿಲ್ಲ । ಹಡೆದವ್ವ
ಮಡದಿ ತವರೀಗಿ ಹೋಗ್ಯಾಳ
ಹಚ್ಚಡದ ಪದರಾಗ ಅಚ್ಚಮಲ್ಲಿಗೆ ಹೂವ
ಬಿಚ್ಚಿ ನನಮ್ಯಾಲ ಒಗೆವಂಥ । ರಾಯರನ
ಬಿಟ್ಹ್ಯಾಂಗ ಬರಲೆ ಹಡೆದವ್ವ