೧೦೫
ಸೂರನ್ ಕರೆಯೋಕ್ ಬಂದ್ ನಿಂತೋರು
ಕೊಡಗೀನ್ ಎಲ್ಲಾ ಪೂವನ್ನೋರು
ತೆಳ್ಳೆ ಬೆಳ್ಳೆ ಬಟ್ಟೆನಾಕಿ
ಬಂದಂಗಿತ್ತು ಮಂಜು.
ಚಿಮ್ರಾನಿದ್ರೆ ಎಳಬಿಸಿಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು!
ಕೊಡಗಿನ್ ಲಸ್ಮೀರ್ ಪೂವನ್ನೋರ್ಗೆ
ಆಲೀನ್ ಸೌಂದ್ರೀ ಮಂಜು!
ಅಗಲೇ ಬರಲಿ ರಾತ್ರಿ ಬರಲಿ
ಬಿಸಲು ನೆರಳು ಏನೇ ಇರಲಿ
ಕಣ್ಮರೆಯಾಗಾಕ್ ತಾವ್ ಕೊಡಾಲ್ಕು
ಮಡಿಕೇರಿಗೆ ಮಂಜು!
ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ- ನನ್ ತಂಗೀ ದ್ದಂಗೆ
ಬಿಟ್ಟೂ ಬಿಡದಂಗ್ ಇಡಕೊ೦ತಿತ್ತು
ಮಡಿಕೇರಿಗೆ ಮಂಜು!
ರತ್ನ
೨೨. ಹುತ್ತರಿ ಹಾಡು
ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ?
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡಗರ ನಾಡಲಾ!
ಅಲ್ಲಿ ಕೊಡವರ ಬೀಡಲಾ!
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ?