ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೪

೩೧.ಎಂಥ ನಾಡಿದು

ಎಂಥ ನಾಡಿದು ಎಂಥ ಕಾಡಾಯಿತೋ!
ಹುಲುಸಾದ ಬೆಳೆ ಹೋಗಿ ಹುಲ್ಲುಕೊಳೆ ತುಂಬಿಹುದೊ!

ಹಗೆಯ ಹೆಸರನ್ನು ಕೇಳಿ ಹುಲಿಯಂತೆ ಹಸುಗೂಸು
ನೆಗೆದು ತೊಟ್ಟಿಲ ತುಳಿದು ಮೆಟ್ಟುತಿಹ ನಾಡಿನಲಿ
ಹಗೆಯ ಊಳಿಗಗೊಂಡು ನಾಯಿ ಬಾಳುಗಳೀಗ
ಬಗೆ ಬಗೆಯ ಬಾಯ್ದೆರೆದು ಹೇಡಿ ನುಡಿ ಬೊಗುಳುತಿಹವೋ!

ನೂರು ರಾಜ್ಯವ ಕಟ್ಟಿ ಬಾನ ಛತ್ರವ ಹಿಡಿದು
ಸಾರಿ ಬನ್ನಿರಿ ಸರುವ ಜನಮನವೆ ಮತಗಳೇ?
ಸಾರಿ ಈ ಪರಿ ಬಾಳ್ದ ಸೀಮೆಯಲಿ ಇದುವೀಗ
ಹರಿದು ಹಂಚುವ ಕಲಹ ಕುಲದೈವವಾಗಿಹುದೆ!
 
ಇಲ್ಲಿಯೇ ಈಸುವುದು ಇದ್ದು ಜೈಸುವುದೆಂಬ
ಎಲ್ಲರೊಡೆಯನ ನಂಬಿ ನಡೆವುದು ಎಂಬ ಆ
ಸೊಲ್ಲೀಗ ಗಾಳಿಯುಯ್ಯಲೆಯಲ್ಲಿ ತೂಗುತಿರೆ
ಒಲ್ಲೆ ಬಾಳನು ಎಂಬ ಗೋಳುಗಳು ಕೇಳುತಿಹವೋ!

ನೆಲದ ಒಳ ಉರಿಯನ್ನು ತೂರಿರುವ ಮೊರಟಾದ
ಸಿಲೆಯ ಸಾವಿರದಿ ಗುಡಿ ಬಸದಿ ರಥ ಗೊಮ್ಮಟರ
ಚೆಲುವು ನನೆಕೊನೆಯಾಗಿ ನಿಲ್ಲಿಸಿದ ನಾಡಿನಲಿ
ಚೆಲುವು, ಕಲೆ, ಹಾಡು, ನುಡಿ ಹೂವುಗಳ ತುಳಿಯುತಿಹರೊ!
 
ಕಾಲಭೂತದ ಕಠಿಣ ಕತ್ತಲೆಯ ಸೆರೆಯಲ್ಲಿ
ಸಿಲುಕಿರುವ ಪುಲಿಕೇಶಿ ನೃಪತುಂಗ ಬಲ್ಲಾಳ ಹರಿಹರರೆ
ಇಲ್ಲಿಯೇ ಉಸಿರಾಡಿ ಈ ನಾಡು ಕಟ್ಟಿದಾ
ಎಲ್ಲರೇ ಮರಳುವುದು ನಿಮ್ಮ ಸಿರಿ ಸೂರೆಗೈಯೆ.

ರಂಗನಾಥ ಶ್ರೀನಿವಾಸ ಮುಗಳಿ

೩೨.ಹಂಪೆಗೆ


ನಿದ್ದೆ ಬಾರದು ಇನ್ನು ಈ ಜನ್ಮಕೆ
ಬಿದ್ದ ಹಂಪೆಯ ಕಂಡು ಕಂಗೆಟ್ಟೆನು
ಕನ್ನಡದ ತಾಯ ಬೇರು ನೀರಡಿಸಿದೆ
ಹೊನ್ನು ಹೊಳೆ ಅದರ ಬಳಿ ತಾಳೊಣಗಿದೆ
ಚೆನ್ನು ಚೆಲುವಿನ ಹಂಪೆ ಹೆಳವಾಗಿದೆ
ಎನ್ನ ತಾಯ್ ಮನೆಧೇನು ಬರಡಾಗಿದೆ