ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೮

ಮೆಲ್ಲ ಮೆಲ್ಲನೆ ತೇಲಿ, ಆಳದಲಿ ಮಲೆಯೆಡೆಯೊಳಲುಗದೆಯೆ ಅಲುಗಿ,
ಕಡಿದು ಬಂಡೆಗೆ ಬಂದು, ನೆಗೆದು ಬೆಳ್ಳ೦ಗೆಡೆವ ನೀರ್-ಬೀಳ ಬೆಳ್ಪು!
ಕಡೆದ ನೊರೆ, ಚಿಗಿನ ನೊರೆ, ತೂರು ನೊರೆ, ಕುದಿವ ನೊರೆ, ಬೆಳ್ಪಿನೊಳ್ ಬೆಳ್ಪು!
ಆ ಬೆಳ್ಪು, ಆ ತೆಳ್ಪು, ಆ ಮೆಲ್ಕು-ನಿನ್ನ ಮಕ್ಕಳ ಬಾಳಿನೊಳ್ಪು;
ನೀರ್-ಬೀಳ ಬೆಳ್ನೊರೆಯ ಬಿಸಿಲ ಬೆಳ್ದಿಂಗಳಾ ಮಳೆಬಿಲ್ಲ ತಳ್ಪು!
ಬೆಳ‍ಗೊಳವೊ, ತೀರ್ಥಗಳೊ, ಧರ್ಮಧರ್ಮದ ತಿರುಳೊ, ಪಾಡುವರ ಪುರುಳೋ,
ಒಳ್ಗನಡದ ಕಲೆಯೊ, ಕುಸುರಿಗೆಲಸದ ಸಿಲೆಯೊ, ಆ ನಯವೊ, ಮೆರುಗೋ!
ನಿನ್ನ ಚಿಣ್ಣರ ಸೊಬಗೊ, ಬೆಡಗೊ, ಮೆಲ್ಲೆದೆ ತಣ್ಪೊ, ಕೊಡುಗೈಯ ಬಿಣ್ಪೋ!
ಓ ಎನ್ನ ತಾಯಿ, ಕನ್ನಡ ತಾಯಿ, ನಮ್ಮವ್ವ, ದೇವಿ, ಸಾಮ್ರಾಜ್ಞಿ,
ನಿನ್ನನರಸುತ ಸುಳಿವ, ನೋಂಪಿಯೆನೆ ನಿನ್ನೊಲುಮೆ-ನಾಡನೊಳಕೊಳುವ,
ನಿನ್ನ ಚೆಲುವನು ಸವಿವ ಮಗುವಾರು ತಣಿಯದನು, ಹಾಡಿ ಕುಣಿಯದನು.
ಭಕ್ತಿಯಲಿ ತಲೆದೂಗಿ ಬಾಗಿ ಮಣಿಯದನು!


ಚೆಲುವು ಕಣಿ ಕಾರ್ವಾರವೆದೆ ತುಂಬಿ, ಗೋಕರ್ಣದಲ್ಲಿ ಮಿಂದು, ಸಂದು,
ಉಡುಪಿಯಲ್ಲಿ ಕೃಷಂಗೆ ಕೈ ಮುಗಿದು, ಮಂಗಳೂರಿನ ಒಂದು ನಂಟರಲಿ ನಿಂದು,
ಚಾರ್ಮಾಡಿ ಘಾಟಿಯನು ಬಳಬಳಸಿ ಮೇಲೇರಿ ಬಂದವನು ಕಂಡೆ, ಕಂಡೆ!
ಮೇಲೆ ತಿಳಿಯಾಕಾಶ, ಸುತ್ತಲೂ ಬೆಟ್ಟ-ಸಾಲ್-ತೋಳ ತೆಕ್ಕೆಯಲಿ
ಕಣಿವೆಯೇರುವ ಕಾಡು, ದಟ್ಟಡವಿ, ಒಮ್ಮೊಮ್ಮೆ ಹಕ್ಕಿಗಳ ಹಾಡು,
ಮರದ ಮರೆಯಲಿ ದುಮುಕುವಬ್ಬಿಗಳ ದಬ್ಬಿ ಹರಡಿದ ಕೂಗು ಕೊರಲು
ಕಂಡೆನಾಕೆಯನಲ್ಲಿ, ದೂರದಲಿ, ಕಣ್-ಪುಣ್ಯ ಮಿಂಚಿ ಮರೆಯಾಯ್ತು!
ಕನ್ನಡದ ಆ ನೋಟ, ದೇವಿಯಾ ದರ್ಶನಂ ಪೊಳೆದು ಬಯಲಾಯ್ತು!
ಎವೆ ಹೊತ್ತಿನಾ ನೋಟ, ಸವಿನೋಟ, ಸವೆಯದೆದೆ-ಚಿಮ್ಮುತಿಹುದಿನ್ನೂ!
ಅಮೃತಲೋಕದ ಮಾತೆ, ಅಳಿಯದಳ್, ಬಾನ್-ಬಾಳ ಪೆರ್ಮೆಗಳ ತಾಯಿ,
ತಲೆಯಲ್ಲಿ ಪೊನ್ನ ಮುಡಿ, ಪದಿದರಿಲ ಪೆಂಪು, ಬೆಳ‍್ದಾವರೆಯು ಪೊಂಗಯ್!
ಸುತ್ತಲುಂ ಪೊನ್ನಾಡ ಕನ್ನಡದ ಪರ್ಮೆನಡಿಗಳ್, ಸಾವನೊದೆದು ಬೆಳಗಿ,
ಕನ್ನಡದ ಮಕ್ಕಳೆ ಕನ್ನಡದ ಪಾಲೆರೆದು ಬಾಳ‍ಗೆ ಬಾಳ್ ಪೊಯ್ದು,
ಬಾಳ್ವವರು, ಮೆರೆವವರು, ಪೆರ್-ನೋಟ! ಪಿರಿಯ ತಾಯ್, ಪಿರಿಯ ಮಕ್ಕಳ್!
ಕಪ್ಪು ಹೆಪ್ಪಿನ ಕುರುಳ ಕರ್ಮುಗಿಲ ಬಸಿರಿಂದ ತೊಟ್ಟನೊಡೆಹೊಮ್ಮಿ,
ಬಾನ ಈ ಕರೆಯಿ೦ದ ಆ ಕರೆಗೆ ಚಿಮ್ಮಿ, ಒಡನಡಗುವುದೆ ತೇಜಂ,
ಆ ತೇಜುದುರಿಯಂತೆ ಕಣ್ಣುಳ‍್ಕಿ, ಹೊರಗಡಗಿ, ಒಳಗಿರ್ದಿಪುನ್ನುಂ.
ಇದೊ ಬಂದೆನೀ ಹಾಳು ಹಂಪೆಗಿಂದರಸುತ್ತ,ಒಳಗಿರ್ಪುದಿನ್ನುಂ
ಒಳಗಿದ್ದು ಹೊರಗಣ್ಗೆ ಕಾಣಿಪುದು ಮತ್ತೊಮ್ಮೆ ಆ ತಾಯ ನೋಟಂ.