ವಿಷಯಕ್ಕೆ ಹೋಗು

ಪುಟ:ಕನ್ನಡದ ಬಾವುಟ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೧

ಮೃಗಗಳ ಮೈಯಲ್ಲಿ ಪುಟ್ಟಲು ಕಸ್ತೂರಿ
ತೆಗೆದು ಪೂಸುವರು ದ್ವಿಜರೆಲ್ಲರು
ಒಗೆಯಿಂದ ನಾರಾಯಣನಾವ ಕುಲವಯ್ಯ
ಜಗವಲ್ಲಭನಾವ ಕುಲ ಪೇಳಿರಯ್ಯ

ಆತ್ಮ ಯಾವ ಕುಲ ಜೀವ ಯಾವ ಕುಲ
ತತ್ವೇಂದ್ರಿಯಗಳ ಕುಲ ಪೇಳಿರಯ್ಯ
ಆತ ಮಹಾತ್ಮನು ನೆಲೆಯಾದಿಕೇಶವ
ಯಾತರ ಕುಲವಯ್ಯ ಆತನೊಲಿದಮೇಲೆ

(iv)


ದಾನ ಧರ್ಮವ ಮಾಡಿ ಸುಖಿಯಾಗು ಮನವೆ
ಹೀನವೃತ್ತಿಯಲಿ ನೀ ಕೆಡಬೇಡ ಮನವೆ ॥ಪ॥

ಎಕ್ಕನಾತಿ ಎಲ್ಲಮ್ಮ ಮಾರಿ ದುರ್ಗಿ ಚೌಡಿ
ಅಕ್ಕರಿಂದಲಿ ಪೂಜೆಮಾಡಲೇಕೆ
ಕಿಕ್ಕಿರಿದು ಯಮನ ದೂತರೆಳೆದೊಯ್ವಾಗ
ಶಕ್ತಿಯರು ಬಿಡಿಸಿಕೊಂಡಾರೇನೊ ಮರುಳೆ

ಸಂಭ್ರಮದಲ್ಲೊಂದು ಹೊತ್ತು ನೇಮದಲಿದ್ದು
ತಂಬಿಟ್ಟಿನಾ ದೀಪ ಹೊರಲೇತಕೆ
ಕೊಂಬು ಹೊತ್ತು ಕುರಿ ಕೋಣನಾ ಬಲಿಗೊಂಬ
ದೊಂಬಿ ದೈವಗಳ ಭಜಿಸದಿರು ಮನವೇ

ಚಿಗುರೆಲೆ ಬೇವಿನಸೊಪ್ಪು ನಾರಸೀರೆ
ಬಗೆ ಬಗೆಯಿ೦ದ ಶೃಂಗಾರಮಾಡಿ
ನೆಗೆನೆಗೆದು ಆಡಲು ಕುಣಿಯಲು ನಿನಗಿನ್ನು
ಮಿಗಿಲಾದ ಮುಕುತಿಯುಂಟೆ ಹುಚ್ಚು ಮನವೆ

ದಾನ ಧರ್ಮ ಪರೋಪಕಾರವ ಮಾಡು
ದೀನನಾಗಿ ನೀ ಕೆಡಬೇಡಿ
ಜ್ಞಾನವಿಲ್ಲದೆ ಹೀನ ದೈವನ ಭಜಿಸಲು
ಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ

ನರಲೋಕದಿ ಯಮನ ಬಾಧೆಯ ಕಳೆಯಲು
ವರ ಪುಣ್ಯ ಕಥೆಗಳ ಕೇಳುತಲಿ
ಸಿರಿಯಾದಿಕೇಶವರಾಯನ ನೆರೆ ನಂಬಿ
ಸ್ಥಿರವಾದ ಪದವಿಯ ಪಡೆ ಹುಚ್ಚು ಮನವೆ