ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶತಮಾನ] . ನಾರಾಯಣಕವಿ. 95

   ಇವನ ಬಂಧವು ಲಲಿತವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ--
   ಸರ್ವಧರ್ಮಂಗಳ್ಗೆ | ಪೂರ್ವಮಪ್ಪುದರಿಂದೆ | ಸರ್ವಾಶ್ರಮಾಧಾರವಪ್ಪ ಕತದಿಂ | 
   ಉರ್ವಿಯೊಳ್ ಮನುಜರ್ಗೆ | ಸರ್ವಸೌಖ್ಯವನೀವ | ಗುರ್ವಿನಿಂದೆಸೆವುದು ಗೃಹಸ್ಥಾಶ್ರಮಂ ||
   ತೃಣದ ಕೊನೆಯ ಜಲ | ಕಣವೆನಿಪುದು ವೆಂ | ರಣಿಸಿದ ಜವ್ವನವದರೊಳಗೆ | 
   ಎಣಿಸದೆ ಕಮ್ಮಂ | ಗಣೆ ಕುಣಿಸಿದವೋಲ್ | ಕುಣಿಯದವನೆ ಕುಳಿಯೆನಿಸುವನು ||
   ಸುದತಿಯರಿಂಗಿತ | ವಿದು ಗುಣವಿದು ಬಗೆ | ಯಿದು ಸಾಜವಿದನುವಿದು ಚೇಷ್ಟೆ |
   ಇದು ಜಾತಿಯಿದೊಂ | ದಿದ ಧರ್ಮವಿದೆಂ | ಬುದನರಿಯದೆ ಬೆರಸುವನಧಮ ||
   ಜಾತಿಯನರಿಯದೆ | ಸೋತುದನರಿಯದೆ | ರೀತಿಯನರಿಯದೆ ಸೊಬಗೆಯರ | 
   ಪ್ರೀತಿಯನರಿಯದೆ | ಭೀತಿಯನರಿಯದೆ | ಕೂರ್ತವನೇ ಕುರಿಯಬ್ಬಮುಖೀ||
   ತರುಣಿ ಮನೋಜನ | ಕರಿಣಿ ಕಲೆಯ ಪು | ಷ್ಕರಿಣಿ ವಿಲಾಸದ ಸರಣಿ ಮಿಗೆ | 
   ಪುರುಳರಿಯದ ಬಾ | ಹಿರನೊಳಗಿರಲದು | ಮರುಳನ ಕೈಮಾಣಿಕದಂತೆ ||
                           ------------
                        ನಾರಾಯಣಕವಿ ಸು. 1450
   ಈತನು ಭಾಗವತಸಂಹಿತಾರ್ಥವನ್ನು ಬರೆದಿದ್ದಾನೆ. ಇವನು ಬ್ರಾಹ್ಮಣಕವಿ; ತನ್ನ ಗುರುಪರಂಪರೆಯನ್ನು ಹೀಗೆ ಹೇಳಿದ್ದಾನೆ-- ವಿದ್ಯಾರಣ್ಯ ಯೋಗಿ, ಶಿಷ್ಯ ಆತ್ಮಾರಾಮಯೋಗಿ, ಶಿಷ್ಯ ನರಸಿಂಹ, ಶಿಷ್ಯ ನಾರಾಯಣ ಕವಿ. ರಾಮಚಂದ್ರಚರಣಾರವಿಂದ ಮಕರಂದಾಸ್ವಾದಿತಭ್ರಮರವರ, ಹರಿ ದಾಸೋತ್ತಮ ಎಂದು ತನ್ನನ್ನು ವಿಶೇಷಿಸಿ ಹೇಳಿಕೊಂಡಿದ್ದಾನೆ. ಇವನು ಹೇಳುವ ವಿದ್ಯಾರಣ್ಯಯೋಗಿ 1386 ರಲ್ಲಿ ಗತಿಸಿದ ಶೃಂಗೇರಿಯ ಮಠದ ಸ್ವಾಮಿಯಾಗಿದ್ದ ಪಕ್ಷದಲ್ಲಿ ಇವನ ಕಾಲವು ಸುಮಾರು 1450 ಆಗಬಹುದು.
   ಇವನ ಗ್ರಂಥ
                         ಭಾಗವತಸಂಹಿತಾರ್ಥ 
   ಇದು ಗದ್ಯರೂಪವಾಗಿದೆ; ಭಾಗವತಮಹಾಪುರಾಣದ ತಾತ್ಪರ್ಯವನ್ನು ನಿರೂಪಿಸುತ್ತದೆ. ನಮಗೆ ದೊರೆತ ಪ್ರತಿಯಲ್ಲಿ 4 ಸ್ಕಂಧಗಳು ಮಾತ್ರ ಇವೆ.
                           -------------