ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶತಮಾನ] ಚೆನ್ನಬಸವಾಂಕ.

     ಪೂರ್ವಕವಿಗಳಲ್ಲಿ ಹರಿಯರಸ, ರಾಘವ, ಶೃಂಗಿರಾಜ, ಕೆರೆಯಪದ್ಮ ರಸ, ಕೇಶಿರಾಜ, ಭೀಮರಸ, ಕರಸ್ಥಲದ ನಾಗಿದೇವ ಇವರುಗಳನು ಸ್ಮರಿಸಿದ್ದಾನೆ.
     ಇವನ ಗ್ರಂಥ
                       ಮಹಾದೇವಿಯಕ್ಕನ ಪುರಾಣ
     ಇದು ನಾನಾಷಟ್ಪದಿಗಳಲ್ಲಿ ಬರೆದಿದೆ; ಕೆಲವು ಸಾಂಗತ್ಯಗಳೂ ಇವೆ; ಸ್ಥಲ 33, ಪದ್ಯ 1604. ಇದರಲ್ಲಿ ವೀರಶೈವಪುರಾತನರಲ್ಲಿ ಒಬ್ಬಳಾದ ಮಹಾದೇವಿಯಕ್ಕನ ಚರಿತವು ಹೇಳಿದೆ. ಈ ಗ್ರಂಥದ ಉತ್ಕೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ-
  ಶಿವಮಹತ್ವದ ಸೆಚ್ಚು| ಶಿವನ ನಿಷ್ಟೆಯ ಕೆಚ್ಚು|
  ಶಿವನ ಸದ್ಭಕ್ತಿಸಾರಾಯದಚ್ಚು||
  ಶಿವದೂಷ್ಯರೆದೆಗಿಚ್ಚು | ಶಿವಯೋಗಿಗಳ ನಚ್ಚು |
  ಶಿವಕಾವ್ಯವಿದು ಶರಣಜನದ ಮಚ್ಚು ||
     ಗ್ರಂಥಾವತಾರದಲ್ಲಿ ಶಿವಸ್ತುತಿ ಇದೆ. ಬಳಿಕ ಕವಿ ನಂದಿ, ಭೃಂಗಿ, ವೀರಭದ್ರ ಇವರುಗಳನ್ನು ಸ್ತುತಿಸಿ ಸಿದ್ಧರಾಮನೇ ಮೊದಲಾದ ಪುರಾತನರನ್ನು ಸ್ಮರಿಸಿದ್ದಾನೆ. ತನ್ನ ಗುರು ಬಸವರಾಜನು-ಮಹಾದೇವಿಯಕ್ಕನ ಚರಿತೆಯನ್ನು ಹರೀಶ್ವರನು ರಘಟಾರೂಪದಿಂದ ಬರೆದಿದ್ದಾನೆ; ನೀನು ಅದನ್ನು ಷಟ್ಪದಿಯಾಗಿ ಬರೆ-ಎಂದು ಆಜ್ಞಾಪಿಸಲು ಈ ಗ್ರಂಥವನ್ನು ಬರೆದಂತೆ ಕವಿ ಹೇಳುತ್ತಾನೆ.
     ಇವನ ಬಂಧವು ಹೃದಯಂಗಮವಾಗಿದೆ. ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ-
                              ಸೂರ್‍ಯೋದಯ
  ಬಿತ್ತು ಮೊಳೆತುದೊ ನೇಸಱಿನ ಪಗಲ್ದೀವಿಗೆಯ |

1 Vol. I, 154. 2 ಸಿದ್ದರಾಮ, ಅಲ್ಲಯ್ಯ, ಬಿಬ್ಬಬಾಚರಸ, ಬಚರಸ, ಗುಪ್ತಮಂಚರಸ, ಕಾಳಿಮರಸ, ಚನ್ನಬಸವ, ಬಸವ, ನಾಗಕ್ಕ, ಸತ್ಯಕ್ಕ, ಚೋಳಿಯಕ್ಕ, ವೈಜಿಕ್ಕ, ಮಹಾದೇವಿಯಕ್ಕ, ನಿಂಬಿಯಕ್ಕ, ಕೋಳೂರಚೆನ್ನಕ್ಕ, ಅಜಗಣ್ಣಯ್ಯನ ಅಕ್ಕಮುಕ್ತಾಯಕ್ಕ.