ಪುಟ:ಕರ್ನಾಟಕ ಕವಿಚರಿತೆ ದ್ವಿತೀಯ ಸಂಪುಟ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ವರ್ಣನೆಗಳು ಬರಿಯ ಕವಿ ಕಲ್ಪನಯೆಂದು ಭಾವಿಸಲಾಗದು. ವಿದೇಶೀಯರು ಇಂಡಿಯಾದೇಶದ ರಾಜ್ಯಗಳನ್ನೂ ಪಟ್ಟಣಗಳನ್ನೂ ವರ್ಣಿಸಿ ಬರೆದಿರುವ ಗ್ರಂಥಗಳಿಂದ ಈ ವರ್ಣನೆಗಳು ಬಹಳ ಮಟ್ಟಿಗೆ ಧ್ರೃಢೀಕೃತವಾಗುತ್ತವೆ. ರಾಜರು-ಕನ್ನಡನಾಡಿನಲ್ಲಿ ಶ್ರೀಪುರುಷ, ನೃಪತುಂಗ, ತೈಲಪ, ತ್ರಿಭುವನಮಲ್ಲ, ವಿಷ್ಣುವರ್ಧನ, ವೀರಬಲ್ಲಾಳ, ಬುಕ್ಕ, ಹರಿಹರ, ಕೃಷ್ಣ ದೇವರಾಯ, ರಾಜನೃಪ, ಕಂಠೀರವನರಸರಾಜ, ಚಿಕ್ಕದೇವರಾಜ ಇವರೇ ಮೊದಲಾದ ಪರಾಕ್ರಮಶಾಲಿಗಳೂ, ವಿದ್ಯಾಪಕ್ಷಪಾತಿಗಳೂ, ಧರ್ಮನಿಷ್ಠರೂ ಆದ ದೊರೆಗಳು ರಾಜ್ಯಭಾರ ಮಾಡಿ ದಿಗಂತ ವಿಶ್ರಾಂತವಾದ ಕೀರ್ತಿಯನ್ನು ನೆಲೆಗೊಳಿಸಿದ್ದಾರೆ. ಇವರು ಭಿನ್ನ ಮತಸ್ಥರಾದರೂ ರಾಗದ್ವೇಷಗಳಿಲ್ಲದೆ ಅನ್ಯಮತಗಳನ್ನು ಸಮದೃಷ್ಟಿಯಿಂದ ಕಾಣುತ್ತ ಅವಕ್ಕೆ ಪ್ರೋತ್ಸಾಹವನ್ನು ಕೊಡುತ್ತಿದ್ದರು. ಬೇರೆ ಬೇರೆ ಮತಸ್ಥರಿಗೆ ಪರಸ ರವೈಮನಸ್ಯವು ಹುಟ್ಟಿದಾಗ ಸಮಾಧಾನಪಡಿಸಿ ಸೌಹಾರ್ದವನ್ನುಂಟುಮಾಡುತ್ತಿದ್ದರು ಗುಣಗ್ರಾಹಿಗಳಾಗಿ ಗುಣವಿಶಿಷ್ಟರಿಗೆ ತಕ್ಕ ಮನ್ನಣೆಯನ್ನು ಮಾಡಿ ಗೌರವಿಸುತ್ತಿದ್ದರು. ವಿದ್ವಾಂಸರು ಇತ್ಯಾದಿ-ಕನ್ನಡನಾಡ ದ್ವೈತಮತೋದ್ಧಾರಕ ಮಧ್ವ ಗುರುವಿಗೆ ತವರುಮನೆ; ಅದ್ವೈತಮತೋದ್ಧಾರಕ ಶಂಕರ ಗುರುವಿಗೂ, ವಿಶಿಷ್ಟಾದ್ವೈತ ಮತೋದ್ಧಾರಕ ರಾಮಾನುಜ ಗುರುವಿಗೂ ಆಶ್ರಯಸ್ಥಾನ. ವೀರಶೈವಮತೋದ್ಧಾರಕ ಬಸವೇಶ್ವರನಿಗೂ ಇದೇ ತವರುಮನೆ. ಇವರುಗಳಿಂದ ಸ್ಥಾಪಿತವಾದ ಮಠಗಳೂ, ಶಾಖಾಮಠಗಳೂ ಇಲ್ಲಿ ಈಗಲೂ ಶೋಭಿಸುತ್ತಿರುವುವು ಅಲ್ಲದೆ ಈ ನಾಡು ವಿದ್ಯಾತೀರ್ಥ, ವಿದ್ಯಾರಣ್ಯ, ಸಾಯಣಾಚಾರ್ಯ, ಶ್ರೀಪಾದರಾಯ, ವ್ಯಾಸರಾಯ, ರಾಘವೇಂದ್ರಯತಿ, ಅನಂತಾಚಾರ್ಯ, ವೇದಾಂತಾಚಾರ್ಯ, ಪುರಂದರದಾಸ, ಕನಕದಾಸ, ಸಿದ್ಧರಾಮ, ತೋಂಟದ ಸಿದ್ಧಲಿಂಗ, ನೇಮಿಚಂದ್ರ, ಶುಭಚಂದ್ರ ಇವರೇ ಮುಂತಾದ ವಿದ್ವದ್ವರ್ಯರಿಂದಲೂ, ತಪೋಧನರಿಂದಲೂ, ತತ್ವದರ್ಶಿಗಳಿಂದಲೂ, ಭಕ್ತಶಿರೋಮಣಿಗಳಿಂದಲೂ, ಹೆಸರುವಾಸಿಯನ್ನು ಹೊಂದಿದ್ದಿತು.