ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೪
ಕರ್ನಾಟಕ ಗತವೈಭವ

ಹೊಯ್ಸಳ-ಯಾದವರು
(೧೧೧೬-೧೩೪೬)


ಚೋ

ಳರು ಗಂಗ ರಾಜರನ್ನು ೧೦೦೪ರಲ್ಲಿ ಮುರಿದ ನಂತರ ಮೈಸೂರಿನ ಪಶ್ಚಿಮದಲ್ಲಿ ಹೊಯ್ಸಳರು ತಲೆಯೆತ್ತಿದರು. ಮುಂದೆ ಅವರು ೧೧೧೬ರಲ್ಲಿ ಚೋಳರನ್ನು ಚದರಿಸಿ ತಾವೇ ರಾಜರಾಗಿ ೧೪ನೆಯ ಶತಮಾನದವರೆಗೆ ಆಳಿದರು. ಈ ವಂಶದ ಮೂಲಪುರುಷನು ಸಳನೆಂಬವನು. ಆತನು ಸುದತ್ತನೆಂಬೊಬ್ಬ ಬ್ರಾಹ್ಮಣ ಯತಿಯಲ್ಲಿ ವಿದ್ಯೆಯನ್ನು ಕಲಿಯುತ್ತಿದ್ದಾಗ, ಒಮ್ಮೆ ವಾಸಂತಿಕಾದೇವಿಯ ಗುಡಿಗೆ ಪೂಜೆಗೆ ಹೋಗಿದ್ದನು. ಆಗ ಅಲ್ಲಿ ಒಂದು ದೊಡ್ಡ ಹುಲಿಯು ಬಂದಿತು. ಕೂಡಲೆ ಆ ಯತಿಯು, ತನ್ನ ಕೈಯೊಳಗಿನ ಬೆತ್ತವನ್ನು ಅವನಿಗೆ ಕೊಟ್ಟು ಆ ಹುಲಿಯನ್ನು 'ಹೊಯ್ಯ' ಕ್ಕೆ ಹೇಳಿದನು. ಸಳನು ಆ ಮೇರೆಗೆ ಅದನ್ನು ಕೊಂದನು. ಅಂದಿನಿಂದ ಅವನ ವಂಶಕ್ಕೆ ಹೊಯ್ಸಳವೆಂದು ಹೆಸರು ಬಂತು. ಈ ಸಳನು ಹುಲಿ ಹೊಡೆಯುವ ಚಿತ್ರಗಳನ್ನೊಳಗೊಂಡ ಕಟ್ಟಡಗಳೆಲ್ಲವೂ ಈ ವಂಶದವರವೇ.

ಕೆಳಗೆ ತಂಜಾವರದಿಂದ ಮೇಲ್ಗಡೆ ಸೊಲ್ಲಾಪುರದವರೆಗೆ ಈ ವಂಶದ ಲೇಖಗಳು ದೊರೆಯುತ್ತವೆ. ಹೊಯ್ಸಳರು ಮೊದಲು ಕಲ್ಯಾಣ ಚಾಲುಕ್ಯರ ಮಾಂಡಲಿಕರಾಗಿದ್ದರು. ಆದರೆ ಮುಂದೆ ವಿಷ್ಣು ವರ್ಧನನ ಕಾಲದಲ್ಲಿ ಇವರು ಸ್ವತಂತ್ರರಾಗಿ ಆಳುತ್ತಿದ್ದರು. ಇವರ ರಾಜಧಾನಿಯು ಮೊದಲು ಬೇಲೂರು, ಅನಂತರ ಹಳೇಬೀಡು ಅಥವಾ ದ್ವಾರಸಮುದ್ರ.
ವಂಶದಲ್ಲಿ ವಿನಯಾದಿತ್ಯ, ವಿಷ್ಣು ವರ್ಧನ ಇವರೇ ಬಲವಾದ ಅರಸರು, ಬಿಟ್ಟಿದೇವ ಅಥವಾ ವಿಷ್ಣುವರ್ಧನನು ಈ ವಂಶಕ್ಕೆ ಮೊದಲು ಪೂರ್ಣ ಸ್ವಾತಂತ್ರವನ್ನು ಕೊಟ್ಟವನು. ಇವನು ರಾಮಾನುಜಾಚಾರ್ಯರ ಉಪದೇಶದಿಂದ ಜೈನಮತವನ್ನು ಬಿಟ್ಟು ವೈಷ್ಣವ ಮತವನ್ನಂಗೀಕರಿಸಿದ ಸಂಗತಿಯು ಎಲ್ಲ ರಿಗೂ ತಿಳಿದಿದೆ. ಈತನು ಮೈಸೂರು ಪ್ರಾಂತದಿಂದ ಚೋಳರನ್ನು ಹೊಡೆದಟ್ಟಿದನು. ಈತನು ಶೂರನಾದ ಅರಸನಾಗಿದ್ದನು. ತಲಕಾಡು, ಉಚ್ಚಂಗಿ, ಬನವಾಸಿ ಮುಂತಾದ ನಾಡುಗಳ ಅರಸರನ್ನು ಗೆದ್ದನು. ತಳಕಾಡು, ದ್ವಾರಸಮುದ್ರ, ಬಂಕಾಪುರ ಮುಂತಾದುವುಗಳು ಬೇರೆಬೇರೆ ಕಾಲಕ್ಕೆ ಈತನ ರಾಜಧಾನಿಗಳಾಗಿದ್ದುವು. ೨ನೆಯ ಬಲ್ಲಾಳ ಅಥವಾ ವೀರಬಲ್ಲಾಳನೇ ಈತನ ತರುವಾಯದ ಪ್ರಸಿದ್ಧ.