ಪುಟ:ಕರ್ನಾಟಕ ಗತವೈಭವ.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೮೦
ಕರ್ನಾಟಕ ಗತವೈಭವ

ವಿಜಯನಗರದ ಅರಸರು


कर्णाटलोकनयनोत्सवपूर्णचंद्रः|
साकं तया हृदयसम्मतया नरेंद्रः॥
कालाचितान्यनुभवन् क्रमशः सुखानि ।
वीरश्चिराय विजयापुरमध्यवात्सीत् ॥

-ಗಂಗಾದೇವಿ.

ರ್ನಾಟಕದ ಕೊನೆಯ ಮನೆತನವೇ ವಿಜಯನಗರವು. ಬಾದಾಮಿಯ ಚಾಲುಕ್ಯರನ್ನು ಕರ್ನಾಟಕ-ಸಿಂಹಾಸನ-ಸ್ಥಾಪನಾಚಾರ್ಯರೆಂದು ಹೇಳಬಹುದು. ಯಾಕೆಂದರೆ, ಚಾಲುಕ್ಯರಿಗಿಂತ ಮೊದಲು ಕದಂಬ, ಗಂಗ ಮುಂತಾದ ಬೇರೆ ಬೇರೆ ರಾಜ್ಯಗಳು ಕರ್ನಾಟಕದಲ್ಲಿ ಆಳಿಹೋಗಿದ್ದರೂ, ಇಡೀ ಕರ್ನಾಟಕವು ಒಬ್ಬನೇ ಅರಸನ ಏಕಛತ್ರಾಧಿಪತ್ಯಕ್ಕೆ ಬಾದಾಮಿಯ ಚಾಲುಕ್ಯರ ಕಾಲದಲ್ಲಿಯೇ ಒಳಪಟ್ಟಿತು. ಆಗ ಸ್ಥಾಪಿತವಾದ ಏಕಛತ್ರಾಧಿಪತ್ಯವು ರಾಷ್ಟ್ರಕೂಟರ ಕಾಲಕ್ಕೂ ಪುನಃ ಕಲ್ಯಾಣ-ಚಾಲುಕ್ಯರ ಕಾಲಕ್ಕೂ ಅವಿಚ್ಛಿನ್ನವಾಗಿ ನಡೆಯಿತು. ಮುಂದೆ ಅದು ಎರಡು ಹೋಳುಗಳಾಗಿ, ಉತ್ತರದ ಅರ್ಧ ಭಾಗವು ದೇವಗಿರಿ ಯಾದವರ ವಶವಾಯಿತೆಂದೂ ದಕ್ಷಿಣದ ಅರ್ಧ ಭಾಗವು ಹೊಯ್ಸಳ ಯಾದವರ ವಶಕ್ಕೆ ಹೋಯಿತೆಂದೂ ಸ್ಥೂಲಮಾನ ದಿಂದ ಹೇಳಬಹುದು. ಮುಂದೆ ಮುಸಲ್ಮಾನರು ದೇವಗಿರಿ ಯಾದವರನ್ನು ಸೋಲಿಸಿ ಉತ್ತರದ ಅರ್ಧ ಭಾಗವನ್ನು ನುಂಗಿದರು. ದಕ್ಷಿಣದ ಅರ್ಧ ಭಾಗವನ್ನು ನುಂಗುವ ಹಂಚಿಕೆಯಲ್ಲಿದ್ದರು. ಮುಸಲ್ಮಾನರ ಮೊದಲನೆಯ ಪ್ರಹಾರವು ದೇವಗಿರಿ ಯಾದವರಿಗೂ ವರಂಗಲ್ಲ ಕಾಕತೀಯ ಅರಸರಿಗೂ ತಗುಲಿತು. ಆ ಪೆಟ್ಟು ತಗಲುವವರೆಗೆ ಮಿಕ್ಕ ಅರಸರು, ಎಚ್ಚರಗೊಳ್ಳಲಿಲ್ಲ. ಆದರೆ ಆ ಪಟ್ಟು ಬಡಿದ ಕೂಡಲೆ ದಕ್ಷಿಣ ಹಿಂದುಸ್ಥಾನದಲ್ಲಿ ಹಾಹಾಕಾರವೆದ್ದಿತು. ಮುಸಲ್ಮಾನರು ಪ್ರಬಲರಾದ ಶತ್ರುಗಳಾದುದರಿಂದ, ಒಬ್ಬೊಬ್ಬರೇ ಅವರಿದಿರಿಗೆ ನಿಂತರೆ ನಡೆಯಲಾರದೆಂದು ಬಗೆದು, ಎಲ್ಲರೂ ಒಕ್ಕಟ್ಟಾಗಿ ನಿಲ್ಲುವುದು ಅವಶ್ಯವೆಂಬ ಕಲ್ಪನೆಯು ಆಗ ಉದ್ಭವಿಸಿತು. ಈ ಕಲ್ಪನೆಯ, ಮೂಲೋತ್ಪಾದಕರೇ ಶ್ರೀ ವಿದ್ಯಾರಣ್ಯರು. ಚದರಿಹೋದ ಚಿಕ್ಕ ಚಿಕ್ಕ ರಾಜ್ಯಗಳನ್ನು ಒಟ್ಟುಗೂಡಿಸಿ, ಮುಸಲ್ಮಾನರಿದಿರಿಗೆ