ಪುಟ:ಕರ್ನಾಟಕ ಗತವೈಭವ.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೮೧
೧೧ನೆಯ ಪ್ರಕರಣ - ವಿಜಯನಗರ ಅರಸರು

ಒಕ್ಕಟ್ಟಿನಿಂದ ನಿಲ್ಲುವಂತೆ ಮಾಡಿದುದೇ ಶ್ರೀ ವಿದ್ಯಾರಣ್ಯರು ಮಾಡಿದ ಮಹತ್ವದ ಕೆಲಸವು. ಪರದೇಶೀಯ ಶತ್ರುಗಳಿಗೆ ಇದಿರಾಗಬೇಕಾದರೆ ನಾವು ನಮ್ಮ ಒಳ ಜಗಳಗಳನ್ನೆಲ್ಲವನ್ನೂ ಮರೆತು ಬಿಡಬೇಕೆಂಬ ತತ್ವವನ್ನು ಹಿಂದುಸ್ಥಾನದ ಇತಿಹಾಸದಲ್ಲಿ ಎಲ್ಲಕ್ಕೂ ಮೊದಲಿಗೆ ಶ್ರೀ ವಿದ್ಯಾರಣ್ಯರೇ ಕಲಿಸಿದವರು. ಈ ತತ್ವವನ್ನರಿಯದ ಮೂಲಕವೇ ಉತ್ತರ ಹಿಂದುಸ್ಥಾನವು ಮುಸಲ್ಮಾನರ ಅಂಕಿತವಾಯಿತು; ಈ ತತ್ವವನ್ನು ಮರೆತ ಮುಸಲ್ಮಾನರು ವಿಜಯನಗರದ ಬಲಾಡ್ಯರಾದ ಅರಸರೊಡನೆ ಸುಮಾರು ಎರಡು ಶತಮಾನಗಳವರೆಗೆ ಎಡೆಬಿಡದೆ ಕಾದಬೇಕಾಯಿತು. ಈ ತತ್ವವನ್ನು ಮುಸಲ್ಮಾನರು ಕಂಡುಹಿಡಿದು, ತಮ್ಮ ತಪ್ಪನ್ನು ತಿದ್ದಿಕೊಂಡು ಒಕ್ಕಟ್ಟಿನಿಂದ ಕಾದಿದುದರಿಂದಲೇ ಅವರಿಗೆ ವಿಜಯನಗರವನ್ನು ಪಾತಾಳಕ್ಕೆ ಮೆಟ್ಟುವುದಕ್ಕೆ ಸಾಧ್ಯವಾಯಿತು, ಇರಲಿ! ಸುಮಾರು ಎರಡು ಶತಮಾನಗಳವರೆಗೆ ವಿಜಯ ನಗರದ ಅರಸರು ಮುಸಲ್ಮಾನರ ಪ್ರವಾಹವನ್ನು ಕೃಷ್ಣೆಯ ದಕ್ಷಿಣಕ್ಕೆ ಬರಗುಡದಂತೆ ಹೇಗೆ ತಡೆದು ಹಿಡಿದರೆಂಬುದರ ಇತಿಹಾಸವು ಅತ್ಯಂತ ಮನೋರಂಜಕವಾಗಿದೆ. ಈ ದೃಷ್ಟಿಯಿಂದ ನೋಡಲು, ವಿಜಯನಗರ ರಾಜ್ಯವು ಹಿಂದಿನ ರಾಜ್ಯಗಳಷ್ಟು ವಿಸ್ತಾರವನ್ನು ಹೊಂದಿರದಿದ್ದರೂ ಅದಕ್ಕಿಂತ ಹೆಚ್ಚು ಮಹತ್ವವುಳ್ಳದ್ದಾಗಿದೆ. ಯಾಕಂದರೆ ದಕ್ಷಿಣ ಹಿಂದುಸ್ಥಾನಕ್ಕೆ ಅತ್ಯಂತ ದುರ್ಘಟವಾದ ಸಂಕಟಕಾಲ ವೊದಗಿದಾಗ ಅದನ್ನು ರಕ್ಷಿಸಿದ್ದೇನೂ ಕಡಿಮೆಯ ಕಾರ್ಯವಲ್ಲ. ವಿಜಯ ನಗರದ ಅರಸರು ತಮ್ಮ ಪೂರ್ವ ವೈಭವವನ್ನೂ ಅಚ್ಚಳಿಯದೆ ಕಾಯ್ದು ಕೊಂಡ ರೆಂಬುದು ಕರ್ನಾಟಕಸ್ಥರಿಗೆ ನಿಜವಾಗಿಯೂ ಅತ್ಯಂತ ಗೌರವಾಸ್ಪದವಾದ ಸಂಗತಿಯಾಗಿದೆ.
ಶ್ರೀ ವಿದ್ಯಾರಣ್ಯರು ಹುಕ್ಕಬುಕ್ಕರನ್ನು ಪ್ರೋತ್ಸಾಹಿಸಿ, ಈ ಸ್ವರಾಜ್ಯ ಸ್ಥಾಪನೆಯ ಕಾರ್ಯವನ್ನು ಕೊನೆಗಾಣಿಸಿದರು. ಶ್ರೀ ವಿದ್ಯಾರಣ್ಯರು ಆಗ ಶೃಂಗೇರಿಯಲ್ಲಿ ಶಂಕರಾಚಾರ್ಯರ ಸ್ಥಾನಾಪನ್ನರಾಗಿದ್ದರು. ಆದರೆ ದೇಶಕ್ಕೆ ಇಂಥ ವಿಪತ್ತು ಬಂದೊದಗಿದಾಗ ಸುಮ್ಮನೆ ಮೂಗು ಹಿಡಿದುಕೊಂಡು ಕುಳ್ಳಿರುವುದು ಮಾತ್ರವೇ ತಮ್ಮ ಕರ್ತವ್ಯವಲ್ಲವೆಂದೂ ಆ ತಮ್ಮ ಧರ್ಮ ರಕ್ಷಣಾರ್ಥವಾಗಿಯೇ ಸ್ವರಾಜ್ಯವನ್ನು ಸ್ಥಾಪಿಸುವುದು ತಮ್ಮ ಆದ್ಯ ಕರ್ತವ್ಯವೆಂದೂ ಆಲೋಚಿಸಿ, ಅವರು ವಿಜಯನಗರದಲ್ಲಿ ರಾಜ್ಯವನ್ನು ಸ್ಥಾಪಿಸಿದರು.ಸಂಗಮವಂಶ (೧೩೩೬-೧೪೭೮),