.
ಗಳಲ್ಲಿ ಬೆರಿಸಿ, ಆ ಮಿಶ್ರಣವನ್ನು ಕಾಸಿ ಕರ್ನಾಟಕದ ಅಭಿಮಾನವೆಂಬ ಎರಕದಲ್ಲಿ ಕೈಲಾದಷ್ಟು ಮಟ್ಟಿಗೆ ಹೊಯ್ದು ಈ ಪ್ರಬಂಧವನ್ನು ರಚಿಸಲಾಗಿದೆ. ಆದುದರಿಂದ, ನಮ್ಮ ಪೂರ್ವಜರ ಗುಣಾನುವಾದವೇ ಈ ಪ್ರಬಂಧದಲ್ಲಿ ಕಂಡುಬರುವುದು. ನಾವು ಹೊಗಳುಭಟ್ಟರಂತೆ ನಮ್ಮ ಪೂರ್ವಜರನ್ನು ಹೀಗೆ ಹೊಗಳಿರುವ ಮಾತ್ರದಿಂದ, ಅವರು ಲೋಕವಿಲಕ್ಷಣರೂ ಸರ್ವಗುಣ ಪರಿಪೂರ್ಣರೂ ದೋಷವಿವರ್ಜಿತರೂ ಆಗಿದ್ದರೆಂದು ನಮ್ಮ ಅಭಿಪ್ರಾಯವಿರುವುದಾಗಿ ಯಾರೂ ಊಹಿಸಕೂಡದು. ಆದರೆ, ಇಲ್ಲದ ಸಲ್ಲದ ದೋಷಗಳನ್ನು ಕೇಳಿ ಕೇಳಿ ನನ್ನ ಕಿವಿಗಳು ಮರಗಟ್ಟಿರುತ್ತವೆ; ಮತಿಯು ಮಸಣಿಸಿದೆ; ಕ್ರಿಯಾಶಕ್ತಿಯು ಕುಗ್ಗಿದೆ, ಮತ್ತು 'ನಾವು ಎಂದಿಗೂ ಹೇಡಿಗಳೇ, ಮುಂದೆಯೂ ಹಾಗೆಯೇ ಉಳಿಯುವವರು' ಎಂಬ ರಾಷ್ಟ್ರವಿಘಾತಕ ಭಾವನೆಯು ನಮ್ಮಲ್ಲಿ ಬೇರೂರಿದೆ. ಆದ್ದರಿಂದ ನಾವು ಅಭಿಮಾನ ಶೂನ್ಯರಾಗಿದ್ದೇವೆ, ಆತ್ಮವಿಶ್ವಾಸವನ್ನು ಕಳೆದುಕೊಂಡಿದ್ದೇವೆ. ಈಗ.
अभिमानविहीनानां किं धनेन किमायुषा ॥
ಎಂಬಂತೆ, ಅಭಿಮಾನಶೂನ್ಯರಾದ ನಾವು ಇದ್ದೂ ಇಲ್ಲದಂತೆಯೇ ಆಗಿದೆ. ಆದುದ ರಿಂದ “ನಾವೂ ಮನುಷ್ಯರು; ನಮ್ಮನ್ನೂ ದೇವರೇ ಹುಟ್ಟಿಸಿರುವನು; ನಮ್ಮಿಂದಲೂ ಹಿಂದಕ್ಕೆ ಮಹಾ ಮಹಾ ಕಾರ್ಯಗಳು ನೆರವೇರಿವೆ; ನಮಗೂ ಬುದ್ಧಿಯುಂಟು, ಭಾಷೆಯುಂಟು, ರಾಷ್ಟ್ರವುಂಟು, ವೈಭವವುಂಟು, ಇತಿಹಾಸವುಂಟು; ಜಗತ್ತನ್ನು ವ್ಯಾಪಿಸಿರುವ ಮಹತ್ವದ ತತ್ವ ವಿಚಾರಗಳು ನಮ್ಮಿಂದಲೇ ಪ್ರಸೃತ ವಾಗಿವೆ; ನಮ್ಮವರೂ 'ಗಂಗಾವಾರಿಧಿಯೋಳ್ ಆತ್ಮತುರಂಗಮಂಮಿಸಿಸಿ'ರ್ದರು. ನಮ್ಮಲ್ಲಿಯ ವಿದ್ವಾಂಸರೂ ವೀರರೂ ಉದಯಿಸಿದರು.” ಇವೇ ಮುಂತಾದ ಕಲ್ಪನೆಗಳನ್ನು ಕನ್ನಡಿಗರಲ್ಲಿ ಹುಟ್ಟಿಸಲು (೧) ಈ ಪ್ರಸ್ತಾವನೆಯ ಪ್ರಾರಂಭದ ಅವತರಣಿಕೆಯಲ್ಲಿ ಲೋಕಮಾನ್ಯರವರು ಹೇಳಿದಂತೆ ಹಿಂದಕ್ಕೆ ಈಗಿನ ಮಹಾ ರಾಷ್ಟ್ರದಲ್ಲಿಯೂ ಕನ್ನಡ ಭಾಷೆಯೇ ಪ್ರಚಲಿತವಾಗಿತ್ತು, (೨) ನಮ್ಮ ಕರ್ನಾಟಕವು ಆಗಿನ ಕಾಲಕ್ಕೆ ತಕ್ಕಂತೆ ಇತಿಹಾಸರಂಗದಲ್ಲಿ ಮುಖ್ಯ ಪಾತ್ರವನ್ನು ಸ್ವೀಕರಿಸಿತ್ತು. ಎಂಬೆರಡು ಸಂಗತಿಗಳನ್ನು ವಾಚಕರ ಲಕ್ಷ್ಯಕ್ಕೆ ತಂದಿಡುವುದೇ ಈ ಪ್ರಬಂಧದ ಮೂಲೋದ್ದೇಶವು.