ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೦೮
ಕರ್ನಾಟಕ ಗತವೈಭವ

ಮನೆಬಿಟ್ಟು ಹೊರಟರು. ಅವರು ಶಿಲ್ಪಕಲಾ ಪ್ರವೀಣರಾಗಿದ್ದದರಿಂದ, ಹೋದ ಹೋದಲ್ಲಿ ಗುಡಿಗಳನ್ನು ಕಟ್ಟುತ್ತ ಕೊನೆಗೆ ಬೇಲೂರಿಗೆ ಬರಲು, ಅಲ್ಲಿಯ ಅರಸನಾದ ವಿಷ್ಣುವರ್ಧನನು ಅವರಿಂದ ಚೆನ್ನಕೇಶವನ ದೇವಾಲಯವೊಂದನ್ನು ಕಟ್ಟಿಸಿದನು. ಆ ಗುಡಿಯಲ್ಲಿ ಚೆನ್ನಕೇಶವನ ಸುಂದರವಾದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಬೇಕೆನ್ನುವಷ್ಟರಲ್ಲಿ, ಹದಿನಾರು ವರುಷದ ಹುಡುಗನೊಬ್ಬನು ಆ ಉತ್ಸವಕ್ಕೆ ಬಂದು, ಆ ಚೆನ್ನಕೇಶವ ಮೂರ್ತಿಯು ಅಶುದ್ಧವಾದ ಕಲ್ಲಿನಿಂದ ಮಾಡಲ್ಪಟ್ಟಿರುವುದೆಂದೂ ಅದು ಪ್ರಾಣ ಪ್ರತಿಷ್ಠಾಪನೆಗೆ ಯೋಗ್ಯವಿಲ್ಲವೆಂದೂ ಪ್ರತಿಪಾದಿಸಿದನು. ಆಗ ಅವರಿಬ್ಬರಲ್ಲಿ ವಾದ ನಡೆಯಿತು. ಅದು ಅಶುದ್ಧ ಎಂದು ತೋರಿಸಿಕೊಟ್ಟರೆ ತಮ್ಮ ಬಲಗೈಯನ್ನೇ ಕಡಿದು ಕೊಂಡುಬಿಡುವೆನೆಂದು ಜಕಣಾಚಾರ್ಯರು ಹೇಳಿದರು. ಆಗ ಆ ಹುಡುಗನು ಆ ಮೂರ್ತಿಯ ನಾಭಿಕಮಲದ ಹತ್ತರ ತುಸು ಮಳಲೂ ನೀರೂ ಒಂದು ಕಪ್ಪೆಯೂ ಇರುವುವೆಂದೂ, ಆದಕಾರಣ ಅದು ಅಶುದ್ಧವೆಂದೂ ಆ ಮೂರ್ತಿಯನ್ನು ಒಡೆದು ಪರೀಕ್ಷಿಸಬಹುದೆಂದೂ ಹೇಳಿದನು. ಆ ಹುಡುಗನ ಮಾತನ್ನು ನಂಬಿ, ಆ ಸುಂದರವಾದ ಮೂರ್ತಿಯನ್ನು ಒಡೆಯುವುದು ಹೇಗೆ ? ಆದುದರಿಂದ ಅವನ ಮಾತನ್ನು ಯಾರೂ ಆಲಿಸಲಿಲ್ಲ. ಆ ಮೂರ್ತಿಯಲ್ಲಿ, ಅವನು ತಾನು ಹೇಳುವಂತೆ ನೀರು ಮುಂತಾದುವು ಇರುವುವೆಂಬ ಬಗ್ಗೆ ತಮಗೆ ವಿಶ್ವಾಸ ಹುಟ್ಟಿಸಿದರೆ ಮಾತ್ರ, ತಾವು ಅದನ್ನು ಒಡೆಯ ಬಹುದೆಂದು ಜನರು ಆ ಹುಡುಗನಿಗೆ ಹೇಳಿದರು. ಆಗ ಆ ಬಾಲಕನು, ತುಸು ವಿಚಾರಮಾಡಿ “ನೀವು ಈ ಮೂರ್ತಿಯ ಶರೀರಕ್ಕೆಲ್ಲ ಗಂಧವನ್ನು ತೊಡೆದು ನೋಡಿರಿ, ಅಂದರೆ ನಾಭಿಕಮಲದ ಹತ್ತಿರ ಒಳಗೆ ನೀರಿರುವುದರಿಂದ ಗಂಧವು ಹಸಿಯುಳಿದು ಮಿಕ್ಕ ಕಡೆಗೆ ಒಣಗುವುದು. ಅಲ್ಲಿ ನೀರಿರುವುದಕ್ಕೆ ಅದೇ ಗುರುತು” ಎಂದು ಉತ್ತರವನ್ನಿತ್ತನು. ಆ ನೆರೆದ ಜನರಿಗೆ ಆ ಮಾತು ಸರಿದೋರಿ ಅವನು ಹೇಳಿದಂತೆ ಮಾಡಿದರು. ನಾಭಿಕಮಲದ ಹತ್ತಿರ ತೊಡೆದ ಗಂಧವು ಆರಲಿಲ್ಲ. ಆಗ ಅವನು ಶಿಲಾಶಾಸ್ತ್ರದಲ್ಲಿ ನಿಪುಣ ನಿರುವನೆಂಬ ಭರವಸವುಂಟಾಗಿ ಅವರು ಆ ಮೂರ್ತಿಯ ನಾಭಿಕಮಲವನ್ನು ಒಡೆದು ನೋಡಲಾಗಿ ಅವನು ಹೇಳಿದಂತೆ, ಒಳಗೆ ಕಪ್ಪೆ, ನೀರು, ಮುಂತಾದುವು ಕಂಡುಬಂದವು. ಅಲ್ಲಿಯ ಮಹಾಜನರಿಗೆಲ್ಲರಿಗೂ ಅತ್ಯಂತ ವಿಸ್ಮಯವುಂಟಾಗಿ