ಪುಟ:ಕರ್ನಾಟಕ ಗತವೈಭವ.djvu/೧೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


೧೧೨
ಕರ್ನಾಟಕ ಗತವೈಭವ

ವಿಷ್ಣುವರ್ಧನ ಅಥವಾ ಬಿಟ್ಟಿದೇವನಿಗೆ ರಾಮಾನುಜಾಚಾರ್ಯರೇ ಗುರುಗಳು. ಕಡೆಗೆ, ಶ್ರೀ ವಿದ್ಯಾರಣ್ಯರು ತಮ್ಮ ಜಗದ್ಗುರು ಪೀಠವನ್ನು ಸಹ ತ್ಯಾಗ ಮಾಡಿ, ಹುಕ್ಕಬುಕ್ಕರ ಸಹಾಯಾರ್ಥವಾಗಿ ಧಾವಿಸಿ, ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು ಹಾಕಿದ ಸಂಗತಿಯೂ ಈ ತತ್ವವನ್ನೇ ಬಲಪಡಿಸುತ್ತದೆ. ಈ ಕಾರಣದಿಂದಲೇ ಅವರಿಗೆ "ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ"ರೆಂದು ಗೌರವದ ಬಿರುದು ಪ್ರಾಪ್ತವಾಯಿತು. ಈ ವಿದ್ಯಾರಣ್ಯರು ಮೂರು ತಲೆಯವರೆಗೆ ರಾಜಕೀಯ ಗುರುಗಳಾಗಿ, ಎಡೆತಡೆಯಿಲ್ಲದೆ ರಾಜ್ಯ ಸೂತ್ರಗಳನ್ನು ನಡೆಸಿದರೂ, ತಾವು ರಾಜ ವೈಭವದಿಂದ ಅಲಿಪ್ತರೇ ಇದ್ದರು. ಅದೇ ಮೇರೆಗೆ ವಿಜಯನಗರದ ಅರಸರಿಗೆ 'ಕ್ರಿಯಾಶಕ್ತಿ ಪಂಡಿತ' ರೆಂಬವರೂ ಗುರುಗಳಾಗಿದ್ದರು, ಸಾರಾಂಶ:- ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ನೆನಪಿನಲ್ಲಿಡತಕ್ಕ ಮೊದಲನೆಯ ಸಂಗತಿಯು- ದೇಶಕ್ಕೆ ಸಂಕಟವೊದಗಿದಾಗ, ಸಾಮಾನ್ಯತಃ ಐಹಿಕ ಸುಖದಿಂದ ಅಲಿಪ್ತರಾಗಿರುವವರೇ, ಯೋಗ್ಯ ಜನರಿಗೆ ಕ್ಷಾತ್ರತೇಜವನ್ನು ಪ್ರಕಟಗೊಳಿಸುವಂತೆ ಪ್ರೇರಿಸಿ, ಅವರಿಂದ ರಾಜ್ಯಗಳನ್ನು ಸ್ಥಾಪಿಸಿ ತಾವು ಮಾತ್ರ ವಿಷಯಸುಖದಲ್ಲಿ ತೊಡಕಿಕೊಳ್ಳದೆ ವಿದ್ಯಾವ್ಯಾಸಂಗದಲ್ಲಿ ಜನ್ಮವನ್ನು ಕಳೆಯುತ್ತಿದ್ದರೆಂಬುದು. ರಾಜಕೀಯ ವಿಷಯಕ್ಕೂ ಧರ್ಮಕ್ಕೂ ಏನೇನೂ ಸಂಬಂಧವಿಲ್ಲವೆಂದು ಕೊಚ್ಚುವವರು ಈ ನಮ್ಮ ಪೂರ್ವಪರಂಪರೆಯನ್ನು ಲಕ್ಷ್ಯದಲ್ಲಿಡಬೇಕು.

ಧಾರ್ಮಿಕ ಇತಿಹಾಸದಲ್ಲಿಯ ಎರಡನೆಯ ಮಹತ್ವದ ಸಂಗತಿಯೇನೆಂದರೆ ದ್ವೈತ ಅದ್ವೈತ ವಿಶಿಷ್ಟಾದ್ವೈತ ಮುಂತಾದ ಪ್ರಬಲ ಮತಗಳಿಗೆ ಕರ್ನಾಟಕವೇ ತವರು ಮನೆಯಾಗಿತ್ತೆಂಬುದು. ಕ್ರಿಸ್ತಶಕದ ಪ್ರಾರಂಭಕ್ಕೆ ಇಲ್ಲಿ ಬೌದ್ಧ ಧರ್ಮವು ಪ್ರಬಲವಾಗಿತ್ತೆಂದೂ, ಅನಂತರ ಅನೇಕ ನೂರು ವರ್ಷಗಳವರೆಗೆ ಜೈನ ಧರ್ಮವು ಹಬ್ಬಿಕೊಂಡಿತ್ತೆಂದೂ, ಅನಂತರ ಶೈವಧರ್ಮಕ್ಕೆ ಉಕ್ಕು ಬಂತೆಂದೂ, ಕೊನೆಗೆ ವೈಷ್ಣವಧರ್ಮವು ಹೆಚ್ಚಿತೆಂದೂ ಸಾಮಾನ್ಯವಾಗಿ ಹೇಳಬಹುದು. ಆದರೆ ದಕ್ಷಿಣ ಹಿಂದುಸ್ಥಾನದಲ್ಲಿ, ಯಾವಾಗಲೂ ಬೌದ್ಧ ಧರ್ಮಕ್ಕಿಂತಲೂ ಜೈನಧರ್ಮವೇ ಪ್ರಬಲವಾಗಿತ್ತು, ಕರ್ನಾಟಕದ ಮೊದಲಿನ ಕವಿಶ್ರೇಷ್ಠರೂ ನೃಪಶ್ರೇಷ್ಠರೂ ಜೈನಧರ್ಮದವರೇ ಆಗಿದ್ದರು.

ಜೈನಮತವನ್ನು ಸಮಂತಭದ್ರನು ೨ನೆಯ ಶತಮಾನದಲ್ಲಿಯೂ ಅಕಲಂಕನು