ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
- ೮ -

ಯಲ್ಲಿರುವ ಈ ಪ್ರಬಂಧವನ್ನು, ಪ್ರಕಾಶನಕ್ಕೆ ಅನನುಕೂಲವಾದ ಈಗಿನ ತುಟ್ಟಿಯ ದಿವಸಗಳಲ್ಲಿಯೇ ಪ್ರಕಟಗೊಳಿಸುವ ಸಾಹಸಮಾಡಿದ್ದೇವೆ. ಇದಲ್ಲದೆ ಮುದ್ರಣಕ್ಕೆ ಪ್ರಾರಂಭ ಮಾಡದೆ ಬರೆಯುವ ಕೆಲಸವು ಒತ್ತರದಿಂದ ಸಾಗುವುದಿಲ್ಲವೆಂದೂ ಹಿಂದಕ್ಕೆ ಬರೆದ ಒಂದು ಪ್ರಬಂಧದಲ್ಲಿಯೇ ಇದರ ರೂಪರೇಖೆಯನ್ನು ತೆಗೆದಿಟ್ಟಿರುವುದರಿಂದ, ಬೇಕಾದಾಗ ಬರೆಯಬಹುದೆಂದೂ ಬಗೆದು ಮುದ್ರಣಕ್ಕೆ ಪ್ರಾರಂಭ ಮಾಡಿದೆವು. ಆದರೆ, ಈಗ ಕೆಲವು ವರ್ಷಗಳಿಂದ ದೇಶದಲ್ಲಿ ವ್ಯಾಪಿಸಿರುವ ಸ್ವರಾಜ್ಯ ಚಳವಳಿಯಲ್ಲಿ ಆಕಸ್ಮಿಕವಾಗಿ ಹೆಚ್ಚಿಗೆ ಮನಸ್ಸನ್ನು ತೊಡಕಿಸಬೇಕಾದುದರಿಂದ, ಸಾಕಷ್ಟು ವೇಳೆಯು ದೊರೆಯದೆ, ಪುಸ್ತಕವನ್ನು ಅವಸರದಿಂದ ಬರೆಯ ಬೇಕಾಯಿತು. ಆದುದರಿಂದ, ಮೊದಲೇ ಆಪೂರ್ಣಾವಸ್ಥೆಯುಳ್ಳ ಈ ಪ್ರಬಂಧಕ್ಕೆ ಹೆಚ್ಚಿಗೆ ಕುಂದು ಉಂಟಾಗಿದೆ. ನಮ್ಮ ಸನ್ಮಾನ್ಯ ಮಿತ್ರರೊಬ್ಬರು, ಹಂಪೆಯ ಶ್ರೀ ಶಂಕರಾಚಾರ್ಯರ ಮಠವೂ ಕರ್ನಾಟಕದಲ್ಲಿಯೇ ಇರುವುದೆಂಬ ಸಂಗತಿಯು ನಮ್ಮ ಸ್ಮೃತಿ ಪಥದಿಂದ ಹಾರಿ ಹೋಗಿರುವುದನ್ನು ಮೊನ್ನೆ ನಮ್ಮ ಲಕ್ಷಕ್ಕೆ ತಂದು ಕೊಟ್ಟಿರುತ್ತಾರೆ. ಇದೇ ಬಗೆಯಾಗಿ, ಮತ್ತೂ ಉಳಿದ ನಾನಾ ತರದ ದೋಷಗಳ ದೆಸೆಯಿಂದ ವಾಚಕರು ನಮ್ಮನ್ನು ಸರ್ವಥಾ ಕ್ಷಮಿಸದೆ, ಅವನ್ನು ಬೈಲಿಗೆ ತಂದರೆ, ನಾವು ಅವರಿಗೆ ಅತ್ಯಂತ ಋಣಿಯಾಗಿ, ಮುಂದೆ ತಿದ್ದುವ ಪ್ರಸಂಗ ಬಂದರೆ ತಿದ್ದುವೆವು. ಆದರೆ, ಇದನ್ನು ಮತ್ತೆ ಮುದ್ರಿಸುವ ಪ್ರಸಂಗವನ್ನೇ ತಾರದೆ, ಕನ್ನಡಿಗರು ಮುಂದುವರಿದು ಬಂದು, ದೋಷವರ್ಜಿತವಾದ ನೂತನ ಗ್ರಂಥಗಳನ್ನು ರಚಿಸಿ, ಇದನ್ನು ಮೂಲೆಗುಂಪಾಗಿ ಮಾಡಬೇಕೆಂದೇ ಅವರಿಗೆ ನಮ್ಮ ಮನಃಪೂರ್ವಕವಾದ ಪ್ರಾರ್ಥನೆ.

ಇರಲಿ; ಇದರಲ್ಲಿಯ ನಕಾಶೆಗಳನ್ನು ಕೇವಲ ಇತಿಹಾಸದ ಮೇಲಿನ ಪ್ರೇಮದಿಂದ ತಯಾರಿಸಿಕೊಟ್ಟ ಶ್ರೀ ರಾಜೇಸಾಹೇಬ ಜಾತಿಗಾರ ಇವರ ಉಪಕಾರವನ್ನು ಈ ಪ್ರಸಂಗದಲ್ಲಿ ಎಷ್ಟು ಸ್ಮರಿಸಿದರೂ ಸ್ವಲ್ಪವೇ! ಈ ಪುಸ್ತಕವನ್ನೋದಿ, ಶಾಂತಕವಿಗಳು ಮೊದಲಿಗೆ ಮತ್ತು ಕಡೆಗೆ ಕೊಟ್ಟ ಕವಿತೆಗಳನ್ನು ಮಾಡಿ ಕೊಟ್ಟು ಆಶೀರ್ವದಿಸಿದ್ದು ಮಹಾ ಭಾಗ್ಯವೆಂದೇ ಭಾವಿಸುವೆವು, ಮಹಾವೀರ ಪ್ರೆಸ್ಸಿನ ಮಾಲಕರು ಈ ಪುಸ್ತಕವನ್ನು ನಿಯಮಿತವಾಗಿಯೂ ಸುಂದರವಾಗಿಯೂ ಮುದ್ರಿಸಿದ್ದನ್ನು ಮರೆಯುವುದು ಹೇಗೆ?