ಪುಟ:ಕರ್ನಾಟಕ ಗತವೈಭವ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೦

ಕರ್ನಾಟಕ ಗತವೈಭವ


ಕವಯಿತ್ರಿಯಾಗಿದ್ದಳೆಂದು ಹೇಳಿದರೆ ಯಾವ ಕನ್ನಡಿಗನಿಗೆ ಆನಂದವಾಗಲಿಕ್ಕಿಲ್ಲ. ಇವಳು ತನ್ನ ಗಂಡನಾದ ಕಂಪಣನು ಮಧುರೆಯ ಮೇಲೆ ದಂಡೆತ್ತಿ ಹೋದ ಸಂಗತಿಯನ್ನು "ಮಧುರಾ ವಿಜಯಂ ಅಥವಾ ವೀರ ಕಂಪಣ ರಾಯಚರಿತಂ” ಎಂಬ ಪ್ರೌಢಶೈಲಿಯಿಂದ ಯುಕ್ತವಾದ ಕಾವ್ಯದಲ್ಲಿ ವರ್ಣಿಸಿರುವಳು.

ಸಾರಾಂಶ, ಸಂಸ್ಕೃತ-ಕನ್ನಡ ವಾಙ್ಮಯಕ್ಕೆ ನಮ್ಮ ಕರ್ನಾಟಕಸ್ಥರು ಮಾಡಿದ ಸೇವೆಯು ಅಷ್ಟಿಷ್ಟೆಂದು ಹೇಳಲಳವಲ್ಲ.

ಕರ್ನಾಟಕದಲ್ಲಿ ಅನೇಕ ಕಡೆ ವಿದ್ಯಾಲಯಗಳಿದ್ದುವು, ವಿಜಯನಗರ, ಬಳ್ಳೆಗಾವಿ ಮುಂತಾದ ಪಟ್ಟಣಗಳಲ್ಲಿ ವಿಶ್ವವಿದ್ಯಾಲಯಗಳಿದ್ದುವು. ಆದರೆ ಅವುಗಳ ವರ್ಣನೆಯನ್ನು ಕೊಡಲು ಇಲ್ಲಿ ಅವಕಾಶವಿಲ್ಲ. ಒಂದೇ ವಿದ್ಯಾಲಯವನ್ನು ಕುರಿತು ತುಸ ಹೇಳುವೆವು.

ಇಂಡಿ ತಾಲೂಕಿಗೆ ಸೇರಿದ ಸಾಲೋಟಗಿ ಎಂಬಲ್ಲಿ, ನೃಪತುಂಗನ ಕಾಲಕ್ಕೆ ಚಕ್ರಾಯುಧನೆಂಬವನು ಒಂದು ವಿದ್ಯಾಲಯವನ್ನು ಸ್ಥಾಪಿಸಿದ್ದನು. ಅವನು ವಿದ್ಯಾರ್ಥಿಗಳಿಗೆ ೫೦೦ 'ನಿವರ್ತನ' ಭೂಮಿಯನ್ನು ದಾನವಾಗಿ ಕೊಟ್ಟನು. ಅಲ್ಲದೆ, ಅವರು ವಾಸಿಸಲಿಕ್ಕೆ ೨೭ ಮನೆಗಳನ್ನು ಕೊಟ್ಟಿದ್ದನು. ಮತ್ತು ಊರಲ್ಲಿ ಮದುವೆ ಮುಂಜಿಗಳಾದರೆ ಆ ಶಾಲೆಗೆ ಜನರು ಇಷ್ಟೇ ಹಣವನ್ನು ಕೊಡಲೇ ಬೇಕೆಂದು ಕಟ್ಟುಮಾಡಿದ್ದನು (ಶಾಲಾ ವಿದ್ಯಾರ್ಥಿಸಂಘಾಯ ಮುದ್ರವ್ಯಾಣಿ ದ್ವಿಜಾತಿಭಿಃ| ಪಂಚಪುಷ್ಪಾಣಿ ದೇಯಾನಿ ವಿವಾಹೆ ಸತಿ ತಜ್ಜನೈಃ). ಅಧ್ಯಾಪಕರಿಗೆ ಇರಲಿಕ್ಕೆ ಮನೆಯ ಅವರ ಉಪಜೀವನಕ್ಕಾಗಿ ಹೊಲವೂ ಕೊಡಲ್ಪಟ್ಟಿದ್ದುವು. ಇದೇ ಬಗೆಯಾಗಿ, ಅನೇಕ ವಿದ್ಯಾಲಯಗಳ ವರ್ಣನೆಗಳನ್ನು ನಾವು ಕಲೆಹಾಕಬಹುದು.

ಈ ಮೇರೆಗೆ ನಾವು ವಾಙ್ಮಯ ವೈಭವವನ್ನು ಸಂಕ್ಷೇಪವಾಗಿ ವರ್ಣಿಸಿರುವೆವು. ಮೊದಲು ಮೊದಲು ಸಂಸ್ಕೃತದ ಪ್ರಾಬಲ್ಯವಿದ್ದುದರಿಂದ, ಕನ್ನಡ ವಾಙ್ಮಯವು ಅದರೊಡನೆ ಕಾದಬೇಕಾಯಿತು. ಬ್ರಾಹ್ಮಣರ ಗ್ರಂಥಗಳೆಲ್ಲವೂ ಅನೇಕ ನೂರು ವರ್ಷಗಳವರೆಗೆ ಸಂಸ್ಕೃತದಲ್ಲಿಯೇ ಇದ್ದುವು, ಆದರೆ ಬೌದ್ಧ ಜೈನ ಧರ್ಮಗಳು ವೈದಿಕ ಧರ್ಮದಿಂದ ಸಿಡಿದು ನಿಂತುದರಿಂದ, ವೈದಿಕ ಧರ್ಮದ ಮುಖ್ಯ ಭಾಷೆಯಾದ ಸಂಸ್ಕೃತದಲ್ಲಿ ಅವರು ಗ್ರಂಥಗಳನ್ನು ಬರೆಯದೆ ದೇಶ