ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೫ನೆಯ ಪ್ರಕರಣ –ವಾಙ್ಮಯ ವೈಭವ
೧೨೧

ಭಾಷೆಯಲ್ಲಿ ಬರೆಯತೊಡಗಿದರು. ಆದರೆ ಮುಂದೆ ಬರಬರುತ್ತ ವೈದಿಕಧರ್ಮದಲ್ಲಿ ಸುಧಾರಕರಾಗಿ ಉದ್ಭವಿಸಿದ ವೀರಶೈವ ಧರ್ಮದವರೂ ಜೈನಬೌದ್ದರನ್ನೇ ಅನುಕರಣಮಾಡಿದರು, ಆದರೆ ಮುಂದೆ ಬ್ರಾಹ್ಮಣರೂ ಕೆಲವಂಶದಿಂದ ಈ ದೇಶಭಾಷೆಯ ಪ್ರಾಬಲ್ಯ ಪ್ರವಾಹದ ಸೆಳವಿಗೆ ಸಿಕ್ಕಿ ಹರಿದುಬಂದರು. ಅವರೂ ತಮ್ಮ ಧರ್ಮ ವಿಷಯಗಳನ್ನು ಕೂಡ ಪ್ರಾಕೃತದಲ್ಲಿ ಬರೆಯ ತೊಡಗಿದರೆಂಬುದು ಶ್ರೀ ಪುರಂದರದಾಸ ಮುಂತಾದವರ ಆಚರಣೆಯಿಂದ ಗೊತ್ತಾಗುತ್ತದೆ. ಈ ಮೇರೆಗೆ ಕನ್ನಡ ವಾಙ್ಮಯವು ಸಂಸ್ಕೃತದೊಡನೆ ಮಾಡಿದ ಯುದ್ಧದ ಕಥೆಯು ಮನೋರಂಜಕವಾಗಿದೆ. ಆದರೆ ಅದನ್ನು ಇಲ್ಲಿ ದಿಗ್ದರ್ಶನ ಮಾಡುವುದಕ್ಕಿಂತ ಹೆಚ್ಚಿಗೆ ಹೇಳುವುದಕ್ಕೆ ಅವಕಾಶವಿಲ್ಲ. ಇಷ್ಟಾದರೂ ಇದು ಪ್ರೇಮ ಯುದ್ದವೇ ಆಗಿತ್ತು. ಏಕಂದರೆ ಸಂಸ್ಕೃತ ಭಾಷೆಯ ವಿಷಯಕ್ಕಿರುವ ಆದರವು ಅದರಿಂದ ತಿಲಪ್ರಾಯವೂ ಕಡಿಮೆಯಾಗಲಿಲ್ಲ. ಇಷ್ಟೇ ಅಲ್ಲ; ಅನೇಕ ಜೈನ ಬೌದ್ಧ ವೀರಶೈವ ಧರ್ಮದವರೂ ಸಂಸ್ಕೃತದಲ್ಲಿ ಗ್ರಂಥಗಳನ್ನು ರಚಿಸಿದರು.

ಶಿಲಾಲಿಪಿ, ತಾಮ್ರ ಪಟಗಳ ವಿಷಯವಾಗಿಯೂ ಸಾಮಾನ್ಯವಾಗಿ ಇದೇ ಪ್ರಕಾರದ ವಿಧಾನವನ್ನು ಮಾಡಬಹುದು. ಪ್ರಾಚೀನ ಶಿಲಾಲೇಖಗಳೆಲ್ಲವೂ ಸಂಸ್ಕೃತದಲ್ಲಿಯೇ ಇವೆ. ಬರಬರುತ್ತ, ಅವುಗಳಲ್ಲಿ ಕನ್ನಡ ಅಕ್ಷರ, ಮತ್ತು ಶಬ್ದಗಳ ಪ್ರವೇಶವಾಗಿದೆ. ಅನಂತರ, ಅವು ಕನ್ನಡ ಮತ್ತು ಸಂಸ್ಕೃತ ಮಿಶ್ರವಾದುವು. ಕೊನೆಗೆ, ಪೂರ್ಣ ಕನ್ನಡ ಶಿಲಾಲೇಖಗಳೇ ಹೆಚ್ಚಾದುವು. ಕದಂಬರ ಕಾಲದ ತಾಮ್ರಪಟಗಳು (ಅವರ ಶಿಲಾಲಿಪಿಗಳು ಕಡಿಮೆ) ಸಂಸ್ಕೃತದಲ್ಲಿ ಇರುತ್ತವೆ. ಚಾಲುಕ್ಯರ ಶಿಲಾಲಿಪಿಗಳಲ್ಲಿ ಅಲ್ಲಿಷ್ಟು ಇಲ್ಲಿಷ್ಟು ಕನ್ನಡ ಅಕ್ಷರಗಳೂ ಶಬ್ದಗಳೂ ದೊರೆಯುತ್ತವೆ, ರಾಷ್ಟ್ರಕೂಟರ ಕಾಲದಲ್ಲಿ ಕನ್ನಡ ಶಿಲಾಲಿಪಿಗಳು ದೊರೆಯುತ್ತವೆ. ಕೊನೆಗೆ ಹೊಸ ಚಾಲುಕ್ಯರ ಕಾಲದಲ್ಲಂತೂ ಶಿಲಾಲಿಪಿಗಳು ಬಹುತರವಾಗಿ ಕನ್ನಡ ಭಾಷೆಯಲ್ಲಿಯೇ ಇರುತ್ತವೆ. ಕೊನೆಗೆ, ನಮ್ಮ ಕನ್ನಡ ಭಾಷೆಯ ವರ್ಚಸ್ಸು ಧರ್ಮ ಕ್ಷೇತ್ರದಲ್ಲಿಯೂ ಹೇಗೆ ಪ್ರಸ್ಥಾಪಿತವಾಗಿತ್ತೆಂಬುದಕ್ಕೆ ಜಗನ್ನಾಥದಾಸರು ರಚಿಸಿದ ಹರಿಕಥಾಮೃತಸಾರದಲ್ಲಿಯ ಎರಡು ಶ್ಲೋಕಗಳನ್ನು ಕೊಟ್ಟು ಈ ಪ್ರಕರಣವನ್ನು ಮುಗಿಸುತ್ತೇವೆ. ಅವು ಯಾವುವೆಂದರೆ-