ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨೨
ಕರ್ನಾಟಕ ಗತವೈಭವ

ಆದರ್ಶವ ಗತಾಕ್ಷಭಾಷಾ (?) ಭೇದದಿಂದಲಿ ಕರೆಯಲದನುನಿ|
    ಷೇಧಗೈದವಲೋಕಿಸದೆ ಬಿಡುವರೆ ವಿವೇಕಿಗಳೂ ||
ಮಾಧವನ ಗುಣ ಪೇಳ್ವ ಪ್ರಾಕೃತ | ವಾದರೂ ಸರಿ, ಕೇಳಿ ಪರಮಾ
    ಹ್ಲಾದಬಡದಿಪ್ಪರೆ ನಿರಂತರ ಬಲ್ಲ ಕವಿಜನರು ||
                                              –೧೭ ನೆಯ ಸ೦ಧಿ ೩೪

ಭಾಸ್ಕರನ ಮಂಡಲವ ಕಂಡು ನ | ಮಸ್ಕರಿಸಿ ಮೋದಿಸದೆ ದ್ವೇಷದಿ |
   ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ ||
ಸಂಸ್ಕೃತವಿದಲ್ಲೆದು ಕುಹಕಿ ತಿ | ರಸ್ಕರಿಸಲೇನಹುದು ಭಕ್ತಿ ಪು |
   ರಸ್ಸರಬ ಕೇಳ್ವರಿಗೆ ಒಲಿವನು ಪುಷ್ಕರಾಕ್ಷಸಖಾ ||
                                             -೧೭ ನೆಯು ಸ೦ಧಿ ೩೫

ಅನೇಕ ಕನ್ನಡಿಗರು ತೆಲಗು ಭಾಷೆಯಲ್ಲಿ ಪಂಡಿತರಾಗಿ ತೆಲಗು ಭಾಷೆಯಲ್ಲಿ ಗ್ರಂಥಗಳನ್ನು ಬರೆದರೂ ಅವರಿಗೆ ತಾವು ಕರ್ನಾಟಕರೆಂದನಿಸಿಕೊಳ್ಳುವುದಕ್ಕೆ ತಿಲಾಂಶದಲ್ಲಿಯೂ ನಾಚಿಕೆಯುಂಟಾಗುತ್ತಿರಲಿಲ್ಲ, ಇಷ್ಟೇ ಅಲ್ಲ, ತಾವು ಕರ್ನಾಟಕರೇ ಎಂದು ಘಂಟಾಘೋಷವಾಗಿ ಸಾರುತ್ತಿದ್ದರು. ಶ್ರೀನಾಥನೆಂಬ ತೆಲಗು ಕವಿಯು ವಿಜಯನಗರದ ರಾಜನಾದ ಹರಿಹರರಾಯನ ಕಾಲಕ್ಕೆ ಪ್ರಸಿದ್ಧಿಗೆ ಬಂದನು. ಇವನು ತಾನು ಬರೆದ 'ಭೀಮೇಶ್ವರ ಪುರಾಣ' ವೆಂಬ ತೆಲಗು ಗ್ರಂಥದಲ್ಲಿ ಬರೆದಿರುವದೇನೆಂದರೆ "ಪ್ರೌಢ ಪರಿಕಿಂಪ ಸಂಸ್ಕೃತ ಭಾಷೆಯೆಂಡ್ರು ! ಪಲುಕು ನುಡಿಕಾರಮುನ ನಾಂಧ್ರ ಭಾಷೆಯೆಂಡ್ರು ! ಯೌವರೇ ಮನ್ನ ನಂಡ್ರು ! ನಾಕೇಮಿ ಕೊರತ ! ನಾ ಕವಿತ್ವಮಂಬು ನಿಜಮು ಕರ್ನಾಟಭಾಷಾ" ||

ಸಾರಾಂಶ:- "ನನ್ನ ಕವಿತೆಯ ಪ್ರೌಢಿ ನೋಡಿದರೆ ಅದು ಸಂಸ್ಕೃತ ಭಾಷೆಯೆನ್ನುವರು | ಮಾತಿನ ರೀತಿಯನ್ನು ನೋಡಿದರೆ ತೆಲುಗು ಭಾಷೆ ಎನ್ನುವರು ಯಾರು ಏನೇ ಎನವಲ್ಲರು! ನನಗೇನು ಕೊರತೆ! ನನ್ನ ಕವಿತ್ವವು ನಿಜವಾಗಿ "ಕರ್ನಾಟಕ ಭಾಷೆ" ಅಹಹ ! ಎಂಥ ಕರ್ನಾಟಕಾಭಿಮಾನವು !!

ಕನ್ನಡಿಗರೇ, ಇಂತಿಂಥವರು ಕನ್ನಡವನ್ನು ಗೌರವಿಸಿರಲು ನಾವು ಅದನ್ನು ತಿರಸ್ಕರಿಸುವುದುಚಿತವೇ !