ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨೪
ಕರ್ನಾಟಕ-ಗತವೈಭವ

ಮುಖ್ಯ ಸಂಗತಿಗಳಾದರೂ ಗೊತ್ತಿರದಿದ್ದರೆ, ನಾವು “ಸುಶಿಕ್ಷಿತ"ರೆಂಬ ನಾಮಾಭಿಧಾನಕ್ಕೂ ಅರ್ಹರಲ್ಲವೆಂದು ನಮ್ಮ ಭಾವನೆ.

ಹಿಂದುಸ್ಥಾನವು ಒಂದು ಸಣ್ಣ ಜಗತ್ತೇ ಇರುತ್ತದೆ. ಇದರಲ್ಲಿ ನಾನಾತರದ ಜನಾಂಗಗಳೂ ಭಾಷೆಗಳೂ ಇರುವುದರಿಂದ ಒಂದು ಭಾಗದ ಇತಿಹಾಸವು ಮತ್ತೊಂದು ಭಾಗದ ಇತಿಹಾಸದಲ್ಲಿ ತೊಡಕಿಕೊಂಡಿರುತ್ತದೆ. ಉದಾ – ಮಹಾರಾಷ್ಟ್ರದ ಇತಿಹಾಸವು ನಮ್ಮ ಇತಿಹಾಸದಲ್ಲಿ ತೊಡಕಿಕೊಂಡಿದೆ. ನಮ್ಮ ಇತಿಹಾಸವು ತಮಿಳರ ಇತಿಹಾಸದಲ್ಲಿ ತೊಡಕಿಕೊಂಡಿದೆ. ಆದಕಾರಣ, ಆಯಾ ಭಾಷೆಯ ಜನರು ತಮ್ಮ ಇತಿಹಾಸವನ್ನು ಅಭ್ಯಾಸ ಮಾಡುವುದಲ್ಲದೆ, ಮಿಕ್ಕ ಇತಿಹಾಸವನ್ನೂ ಅಭ್ಯಾಸಮಾಡಬೇಕಾಗುವುದು, ಅದಕ್ಕಾಗಿ ಬೇರೆ ಬೇರೆ ಪ್ರಾಂತಿಕ ಇತಿಹಾಸ ಮಂಡಲಗಳಲ್ಲದೆ ರಾಷ್ಟ್ರೀಯ ಇತಿಹಾಸ ಮಂಡಲವೊಂದನ್ನು ವಿದ್ವಾಂಸರು ಏರ್ಪಡಿಸಬೇಕೆಂದು ನಮ್ಮ ನಮ್ರ ಸೂಚನೆ.

ಆದರೆ, ಕರ್ನಾಟಕಸ್ಥರೇ! ನಾವು ನಮ್ಮ ರಾಷ್ಟ್ರೀಯ ಧ್ಯೇಯವನ್ನು ಮಾತ್ರ ಎಂದೆಂದಿಗೂ ಕಣ್ಣು ಮುಂದಿನಿಂದ ಕೀಳಬಾರದು. “ನಮ್ಮ ಪೂರ್ವಜರು ದೊಡ್ಡವರಾಗಿದ್ದರು; ವಿದ್ವಾಂಸರಾಗಿದ್ದರು; ಬಲಾಢ್ಯರಾಗಿದ್ದರು; ಅವರ ವೈಭವವು ಅಪಾರವಾಗಿತ್ತು” ಎಂದು ಮುಂತಾಗಿ ಒರಲುತ್ತ ಕುಳಿತ ಮಾತ್ರಕ್ಕೆ ಕಾರ್ಯವಾಗಲಿಲ್ಲ. ಆ ವಿಚಾರಗಳಿಂದ ನಾವು ಉತ್ಸಾಹಗೊಂಡು, ವರ್ತಮಾನ ಕಾಲದ ಹೀನ ಸ್ಥಿತಿಯನ್ನು ದೂರ ಮಾಡಬೇಕೆಂದು ಪ್ರತಿಜ್ಞೆ ಮಾಡಿ. ಭವಿಷ್ಯ ಕಾಲದ ಧ್ಯೇಯವನ್ನು ಪಡೆಯಲಿಕ್ಕೆ ಈ ಇತಿಹಾಸದ ಸಹಾಯವನ್ನು ಪಡೆದರಲ್ಲವೇ ಇದರ ಪ್ರಯೋಜನವು? ಹಿಂದಿನ ವೈಭವವನ್ನು ನೆನೆಸುವುದೇ ನಿರರ್ಥಕವೆಂದು ತಿಳಿಯುವುದು ಎಷ್ಟು ಹೆಡ್ಡತನವೋ ಅಷ್ಟೇ, ಹಿಂದಿನ ವೈಭವವನ್ನು ನೆನಿಸಿ ಮುಳು ಮುಳು ಅಳುತ್ತ ಕೈಕಾಲು ಕಳೆದುಕೊಂಡು ಕುಳ್ಳಿರುವುದೂ ತಿರಸ್ಕರಣೀಯವು. ಹಿಂದಿನ ಇತಿಹಾಸದ ಪ್ರಯೋಜನವನ್ನು ಮುಂದಿನ ರಾಷ್ಟ್ರೀಯ ಉನ್ನತಿಗಾಗಿ ನೇರ್ಪಡಿಸಿಕೊಳ್ಳುವುದೇ ಜಾಣತನದ ಮಾರ್ಗವು. ನಾವು ಸುಧಾರಣೆಯ ಉಚ್ಚ ಶಿಖರದಿಂದ ಈಗ ಪತಿತರಾಗಿರುವೆವಲ್ಲವೆ? ಹಾಗೆ ಪತಿತರಾಗುವುದಕ್ಕೆ ಬೇಕಾಗುವ ವಿಘಾತಕ ಬೀಜಗಳು ನಮ್ಮಲ್ಲಿ ಈಗ ಬೀಡುಬಿಟ್ಟು ಕೊಂಡಿರುವುವು. ಅವುಗಳನ್ನು ಕಂಡುಹಿಡಿದು ಕಿತ್ತು ಹಾಕುವುದಕ್ಕೆ ಇತಿಹಾಸವೇ ಔಷಧವು.