ಪುಟ:ಕರ್ನಾಟಕ ಗತವೈಭವ.djvu/೧೬೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೧೩೬
ಕರ್ನಾಟಕ-ಗತವೈಭವ

೧೮೯೫ನೆಯ ಇಸವಿಯಲ್ಲಿ ಪುನಃ ವಿಚಾರ ನಡೆಯಿತು. ಮೂರು ವರ್ಷ ವಿಚಾರ ನಡೆದು, ೧೮೯೭ ನೆಯ ಇಸವಿಯಲ್ಲಿ ಕಾನ್ಸರ್ವೆಶನ್ (Conservation) ಎಂದರೆ ಕಟ್ಟಡ ಮುಂತಾದವುಗಳನ್ನು ರಕ್ಷಿಸುವ ಕೆಲಸವು ರೀಸರ್ಚ್(Research) ಎಂದರೆ ಹೊಸ ಶೋಧಕ್ಕಿಂತ ಮಹತ್ವದ ಕೆಲಸವೆಂದು ನಿರ್ಧರಿಸಲ್ಪಟ್ಟಿತು. ಆಗ ಪುನಃ ಐದು ಸರ್ವೇ ಕ್ಷೇತ್ರಗಳು ಏರ್ಪಟ್ಟುವು. (೧) ಮದ್ರಾಸ (ಕೊಡಗು ಸಹಿತ), (೨) ಮುಂಬಯಿ (ಸಿಂಧ ಮತ್ತು ವರ್ಹಾಡ ಸಹಿತ), (೩) ಪಂಜಾಬ (ಬಲೂಚಿಸ್ಥಾನ ಅಜಮೀರ ಇವುಗಳು ಸಹಿತ), (೪) ವಾಯವ್ಯ ಪ್ರಾಂತ (ಮಧ್ಯ ಪ್ರಾಂತಸಹಿತ), (೫) ಬಂಗಾಲ (ಅಸಾಮ ಸಹಿತ) ಈ ಇಲಾಖೆಗಳೇ ಇನ್ನೂ ಇರುತ್ತವೆ. ಪ್ರತಿಯೊಂದು ಇಲಾಖೆಯ ಮುಖ್ಯಸ್ಥನ ವೇತನವು ಹಿಂದುಸ್ಥಾನ ಸರಕಾರದಿಂದ ಕೊಡಲ್ಪಡುತ್ತದೆ. ಆದರೆ ಅವನು ಪ್ರಾ೦ತಿಕ ಸರಕಾರಕ್ಕೆ ತಾಬೇದಾರನಾಗಿರುತ್ತಾನೆ.
೧೯೦೨ನೆಯ ಇಸವಿಯಲ್ಲಿ ಲಾರ್ಡ ಕರ್ಝನರು ಈ ವಿಷಯದಲ್ಲಿ ಒಂದು ಹೊಸ ಘಟನೆಯನ್ನು ಸಿದ್ಧ ಮಾಡಿದಾಗ ಡಾಯರೇಕ್ಟರ ಜನರಲ್ (Director General) ರವರು ಐದು ವರ್ಷಗಳ ವರೆಗೆ ನೇಮಿಸಲ್ಪಟ್ಟರು. ಇಷ್ಟು ದಿವಸ ದೇಶಿ ಸಂಸ್ಥಾನಗಳನ್ನು ಈ ಕಾರ್ಯಕ್ಷೇತ್ರದಲ್ಲಿ ಸೇರಿಸಿರಲಿಲ್ಲ, ಆದರೆ ೧೯೦೧ ನೆಯ ಜೂನ ೪ರಲ್ಲಿ ಹೊಸ ಹುಕುಮು ಹೊರಟು ದೇಶೀ ಸಂಸ್ಥಾನಗಳೂ ಈ ಖಾತೆಗೆ ಕೂಡಿಸಲ್ಪಟ್ಟುವು. ೧೯೦೨-೩ರಲ್ಲಿ ಆರ್ಕಿಆಲಾಜಿಕಲ್ ಸರ್ವೆ ಆಫ್ ಇಂಡಿಯ ವಾರ್ಷಿಕ ರಿಪೋರ್ಟು (Archaeological Survey of India, Annual Reports) ಗಳು ಪ್ರಾರಂಭವಾದವು. ಮೊದಲನೆಯ ರಿಪೋರ್ಟು ಅಂದರೆ ೧೯೦೨-೩ ನೇ ಇಸವಿಯ ರಿಪೋರ್ಟು ೧೯೦೪ರಲ್ಲಿ ಮುದ್ರಿತವಾಗಿರುತ್ತದೆ. ಆಗಿನಿಂದ ಈ ರಿಪೋರ್ಟುಗಳು ಪ್ರತಿವರ್ಷ ಹೊರಡುತ್ತಿದ್ದು ಇದರಲ್ಲಿ ಇಡೀ ಹಿಂದುಸ್ಥಾನದಲ್ಲಿ ಆಯಾ ವರ್ಷದಲ್ಲಿ ಆದ ಕೆಲಸದ ಮಾಹಿತಿಯು ಸಂಗ್ರಹಿಸಲ್ಪಟ್ಟಿರುವುದರಿಂದ ಈ ರಿಪೋರ್ಟುಗಳು ಬಹಳ ಮಹತ್ವವುಳ್ಳವುಗಳಾಗಿವೆ. ಇದಲ್ಲದೆ, ಪ್ರತಿಯೊಂದು ಇಲಾಖೆಯವರು ತಮ್ಮ ತಮ್ಮ ಚಿಕ್ಕ ಚಿಕ್ಕ ರಿಪೋರ್ಟುಗಳನ್ನು ಮುದ್ರಿಸುತ್ತಿರುವರು. ಈ ವಿಷಯದಲ್ಲಿ ಲಾರ್ಡ ಕರ್ಝನ ಸಾಹೇಬರು ತೆಗೆದ ಉದ್ಧಾರಗಳು ಲಕ್ಷ್ಯದಲ್ಲಿಡತಕ್ಕವಾಗಿವೆ. ಅವೇನೆಂದರೆ-