ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨ನೆಯ ಪ್ರಕರಣ – ಕರ್ನಾಟಕವು ಮೈ ತರಾಷ್ಟವೇ?
೧೩

ಯಿತು! ಈಗಲಾದರೂ ಕಣ್ದೆರೆದು, ನಾವು ನಮ್ಮ 'ಕರ್ನಾಟಕ' ವನ್ನು ಅರಿತು, ನಮ್ಮ ಮುಂದಣ ಮಾರ್ಗವನ್ನು ತಿದ್ದಿಕೊಂಡರೆ, ಜಗತ್ತಿನ ನಗೆಗೀಡಾಗದೆ, ನಮ್ಮ ಮಾನವನ್ನು ನಾವು ಕಾಯ್ದು ಕೊಂಡಂತಾಗುವದು, ಇದೀಗ ನಮ್ಮೆಲ್ಲರ ಶ್ರೇಷ್ಠವಾದ ಕರ್ತವ್ಯವು.
ಹಾಗಾದರೆ ಆ 'ಕರ್ನಾಟಕತ್ವ' ವನ್ನು ಅರಿತುಕೊಳ್ಳುವದೆಂತು! ಅದೇನು ಕಣ್ಣಿಗೆ ಕಾಣಿಸುವದೋ ! ಕಿವಿಗೆ ಕೇಳಿಸುವದೋ ! ಕೈಗೆ ಸ್ಪರ್ಶಿಸುವದೊ ! ಮೂಗಿಗೆ ಮೂಸುವದೋ ! ಇಲ್ಲ. ಇಲ್ಲ. ಹಾಗಿದ್ದರೆ ಈ ಕಾರ್ಯವು ಎಷ್ಟೊಂದು ಸುಲಭ ಸಾಧ್ಯವಿರಬಹುದಾಗಿತ್ತು ! ಆಮೇಲೆ ಈ ತರದ ಗೊಂದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ: ಹಾಗಿಲ್ಲವೆಂದೇ ಪ್ರತಿಯೊಬ್ಬನು ಅದನ್ನು ಜ್ಞಾನ ದೃಷ್ಟಿಯಿಂದಲೇ ಕಂಡುಹಿಡಿದು, ಅದರ ಅಸ್ತಿತ್ವವನ್ನು ಹೃನ್ಮಂದಿರದಲ್ಲಿ ಚಿಂತಿಸ ಬೇಕಾಗಿದೆ! ಆದರೆ ಅಹಾ! ಆ ತರದ ದೃಷ್ಟಿಯಿಲ್ಲದಿರುವದರಿಂದಲೇ ನಾವು ಕಣ್ಣಿದ್ದು ಕುರುಡರೂ, ಕಿವಿಯಿದ್ದು ಕಿವುಡರೂ, ಆಗಿದ್ದೇವೆ! ನನ್ನ ಸುತ್ತಲೂ ಎಲ್ಲೆಲ್ಲಿಯೂ ಇತಿಹಾಸದ ರಾಶಿಯೇ ಒಟ್ಟಿದ್ದೂ, ನಮಗೆ ಇತಿಹಾಸವೇ ಇಲ್ಲವೆಂದು ನಾವು ಸುಮ್ಮನೆ ಅರಚಿಕೊಳ್ಳುತ್ತಿದ್ದೇವೆ! ಇದೋ, ಇಲ್ಲಿ ನಮ್ಮಿದಿರಿಗೆ ಮೈಗೊಂಡು ನಿಂತಿರುವ ಈ ಕೋಟೆ ಕೊತ್ತಳಗಳು ನಮ್ಮ ಗತವೈಭವದ ಹೆಗ್ಗುರುತುಗಳಲ್ಲವೇ! ಅದೋ, ಅಲ್ಲಿ ಕಾಣುತ್ತಿರುವ ಸುಂದರವಾದ ಭವ್ಯ ದೇವಾಲಯಗಳು ನಮ್ಮ ಇತಿಹಾಸದ ಪವಿತ್ರ ರಕ್ಷಾ ಭಾಂಡಾರಗಳಲ್ಲವೇ ! ಜಗತ್ತಿನಲ್ಲೆಲ್ಲ ಹೆಸರು ಪಡೆದಿರುವ ದ್ವೈತ, ಅದ್ವೈತ, ವಿಶಿಷ್ಟಾದ್ವೈತವೆಂಬೀ ಮತಗಳು ಕರ್ನಾಟಕಸ್ಥರ ಹೆಸರನ್ನು ಎಂದಾದರೂ ಮರೆಯಿಸುವವೇ ! ಕೋಣದ ಮುಂದೆ ಕಿನ್ನರಿಯನ್ನು ಬಾರಿಸಿದಂತೆ, ಇವೆಲ್ಲವು ನಮ್ಮ ಮನಸ್ಸಿನಲ್ಲಿ ಕಿಂಚಿತ್ತಾದರೂ ಸ್ಫೂರ್ತಿಯನ್ನುಂಟುಮಾಡುವದಿಲ್ಲವಲ್ಲ! ಕರ್ನಾಟಕವು ನಮ್ಮ ಹುಟ್ಟು ನಾಡು! ಅದನ್ನಾಳಿದ ಅರಸರು ನಮ್ಮವರು! ಸಂಕಟಕಾಲದಲ್ಲಿ ಅದರ ಜೋಕೆಗಾಗಿ ಕಾದಿ, ನೀರಿನಂತೆ ತನ್ನ ಮೈ ನೆತ್ತರವನ್ನು ಬಸಿದಂಥ ಕಾದಾಳುಗಳು ನಮ್ಮ ವೀರಬಂಧುಗಳು! ಅನೇಕ ಶತಮಾನಗಳು ಸಂದು ಹೋದರೂ ದಿಕ್ಕುದಿಕ್ಕುಗಳಲ್ಲಿ ತಮ್ಮ ಕೈಗಾರಿಕೆಯ ಸೊಕ್ಕಿನಿಂದ ಮೊಗವೆತ್ತಿಕೊಂಡು ನಿಂತಿರುವ ಗುಡಿಗೋಪುರಗಳು ನಮ್ಮ ಪುರಾತನ ಶಿಲ್ಪಶಾಸ್ತ್ರದ ಮಾದರಿಗಳು! ಎಂಬ ಅಭಿಮಾನವು ನಮ್ಮ ಮನೋಭೂಮಿಕೆಯಲ್ಲಿ