ಪುಟ:ಕರ್ನಾಟಕ ಗತವೈಭವ.djvu/೩೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ಕರ್ನಾಟಕ ಗತವೈಭವ


ಎಲ್ಲಿಯವರೆಗೆ ಅಂಕುರಿಸುವದಿಲ್ಲವೋ, ಅಲ್ಲಿಯ ವರೆಗೆ ಅವೆಲ್ಲವು ನಮ್ಮನ್ನು ಕಣ್ಣೆತ್ತಿ ನೋಡಲಾರವು! ನಮ್ಮನ್ನು ಸಮೀಪಿಸಲಾರವು! ನಮಗೆ ಬೋಧಿಸಲಾರವು! ನಮ್ಮನ್ನು ಪ್ರೇರಿಸಲಾರವು ! ಎಂದಮೇಲೆ, ಸವಿ ಸವಿಯೂಟಗಳನ್ನುಂಡು ವೀಳ್ಯವನ್ನು ಮೆಲ್ಲುತ್ತಲೂ, ಚಕ್ಕಂದವಾಡುತ್ತಲೂ, ಕೇವಲ ತಾಮಸವೃತ್ತಿಯಿಂದ ಕಾಲ ಕಳೆಯುತ್ತಿರುವ ನಮ್ಮಂಥ ವಿಚಾರ ಶೂನ್ಯರಾದ ಕನ್ನಡಿಗರಲ್ಲಿ ಅವುಗಳ ನೋಟದಿಂದ ಉಚ್ಚ ಭಾವನೆಯುಂಟಾಗುವ ಮಾತಂತೂ ದೂರವೇ ಸರಿ! ಕನ್ನಡಿಯಲ್ಲಿ ನಮ್ಮ ಮುಖವು ಕಾಣಿಸಬೇಕಾದರೆ ಅದು ಸ್ವಚ್ಛವಾಗಿರಬೇಕು. ಹಾಗೆಯೇ ಇಂಥ ಉದಾತ್ತ ಕಲ್ಪನೆಗಳು ನಮ್ಮಲ್ಲಿ ಮೂಡಬೇಕಾದರೆ, ನಮ್ಮ ಮನಸ್ಸು ಶುದ್ಧವೂ, ಸಾತ್ವಿಕಾಹಂಕಾರದಿಂದೊಡಗೂಡಿದ್ದೂ ಇರಬೇಕು, ಯಾವ ಮನುಷ್ಯನಲ್ಲಿ ಸಾತ್ವಿಕಾಹಂಕಾರದ ಕಿರಣಗಳು ಕಾಣಬರುವದಿಲ್ಲವೋ ಅವನ ಬಾಳು ಬಾಳಲ್ಲ. ಅದು ಭೂಭಾರವು. 'ನಾನು ಕನ್ನಡಿಗನು', 'ಕರ್ನಾಟಕವು ನನ್ನ ನಾಡು' ಎಂಬ ಸಕೃದ್ವಿಚಾರತರಂಗಗಳಿಂದ ಯಾವನ ಹೃದಯವು ಅತ್ಯಾನಂದದಿಂದ ಧಿಂಕಿಡುವದಿಲ್ಲವೋ, ಕನ್ನಡ ತಾಯಿಗೆ ಈಗ ಬಂದೊದಗಿರುವ ವಿಷಮ ಸ್ಥಿತಿಯಲ್ಲಿ ಯಾವಾತನ ಹೃದಯವು ತಲ್ಲಣಿಸುವದಿಲ್ಲವೋ, ತಳಮಳಿಸುವದಿಲ್ಲವೋ, ರೋಮ ರಂಧ್ರಗಳಲ್ಲಿ ಕೂಡ 'ಕರ್ನಾಟಕ' 'ಕರ್ನಾಟಕ' ಎಂದು ಸೊಲ್ಲು ಹೊರಡುವದಿಲ್ಲವೋ, ಅದು ಹೃದಯವಲ್ಲ; ಕಲ್ಲಿನ ಬಂಡೆ! ದೇಹವಲ್ಲ; ಮೋಟು ಮರ! 'ಇಂಥ ಚೇತನವಿಲ್ಲದಿರುವ ಜನರಿಗೆ ಕಣ್ಣೀರಿಡುತ್ತಿರುವ ಆ ಕನ್ನಡ ತಾಯಿಯ ಗೋಳಿನಿಂದೇನು ! ಕಳಚಿ ಬೀಳುತ್ತಿರುವ ಆ ಗುಡಿ ಗೋಪುರಗಳಿಂದೇನು ! ಬಾಯಿಯಿಲ್ಲದ ಉಚ್ಚ ಧ್ವನಿಯಿಂದ ಕೂಗುತ್ತಿರುವ ಆ ವಾಙ್ಮಯದಿಂದೇನು! ಕಾಡು ಬೀಡುಗಳಲ್ಲಿ ಕೇಳುವವರಿಲ್ಲದೆ ಸುಮ್ಮನೆ ಗಂಟಲು ಹರಿದುಕೊಂಡು ಕೂಗಿ ಹೊಗಳು ಭಟ್ಟರಂತೆ ತಮ್ಮ ವೀರರನ್ನೂ, ವೀರಸತಿಯರನ್ನೂ ಹೊಗಳುತ್ತಿರುವ ಆ ವೀರಗಲ್ಲು, ಮಹಾಸತಿಕಲ್ಲುಗಳಿಂದೇನು! ಆದುದರಿಂದ ಎಲೈ ಕನ್ನಡಿಗರೇ ! ನೀವು 'ಕರ್ನಾಟಕಾಭಿಮಾನ ದೇವತೆ'ಯನ್ನು ಪ್ರಸನ್ನೀಕರಿಸಿಕೊಂಡು, ಅವಳ ಅಮರತ್ವವನ್ನು ಜ್ಞಾನದೃಷ್ಟಿಯಿಂದ ಕಂಡು ಹಿಡಿದು, ಅವಳ ಇತಿಹಾಸವನ್ನು ಆದ್ಯಂತವಾಗಿ ಪರಿಶೀಲಿಸಿ, ಕನ್ನಡಿಗರೆಂಬ ನಿಮ್ಮ ಹೆಸರನ್ನು ಸಾರ್ಥಕಪಡಿಸಿಕೊಳ್ಳಿರಿ!