ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಗತವೈಭವ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಕರ್ನಾಟಕ ಗತವೈಭವ

ಮೇಲಾಗಿ ಚಂದ್ರಗುಪ್ತನು ತನ್ನ ಗುರುವಾದ ಭದ್ರಬಾಹುವನ್ನು ಕರೆದುಕೊಂಡು ದಕ್ಷಿಣ ದೇಶಕ್ಕೆ ಬಂದಿದ್ದನೆಂದೂ ಅವರೀರ್ವರು ಮೈಸೂರು ಪ್ರಾಂತದಲ್ಲಿಯ ಚಂದ್ರಗಿರಿಯಲ್ಲಿ ತಪಶ್ಚರ್ಯ ಮಾಡಿದರೆಂದೂ ಇತ್ತ ಕಡೆಯ ಆರನೆಯ ಶತಮಾನದ ಕೆಲವು ಶಿಲಾಲಿಪಿಗಳಿಂದ ಗೊತ್ತಾಗಿರುವ ಸಂಗತಿಯ ಮೇಲಿನ ಊಹೆಗೆ ಮುಂದೆ ಪುಷ್ಟಿಯನ್ನು ಕೊಡುತ್ತದೆ. ಅಶೋಕನ ಕಾಲದಲ್ಲಂತೂ ಈ ದೇಶವು ಅವನ ಅಧೀನದಲ್ಲಿತ್ತೆಂಬುದನ್ನು ಇಲ್ಲಿ ದೊರೆಯುವ ಅವನ ಶಿಲಾಶಾಸನಗಳೇ ಹೇಳುತ್ತವೆ. ಆ ಶಾಸನಗಳು ಮೊಳಕಾಲ್ಮುರು ತಾಲುಕಿನಲ್ಲಿಯ ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರ ಗುಡ್ಡಗಳಲ್ಲಿ ದೊರೆತಿರುತ್ತವೆ. ರಾಯಚೂರ ಜಿಲ್ಲೆಯೊಳಗಿನ ಲಿಂಗಸೂರ ತಾಲುಕ ಪೈಕಿ 'ಮಸ್ತಿ' ಎಂಬಲ್ಲಿಯೂ ಒಂದು ಶಾಸನವು ಮೊನ್ನೆ ಮೊನ್ನೆ ಸಿಕ್ಕಿರುತ್ತದೆ. ಅಶೋಕನ ಕಾಲಕ್ಕೆ ಬನವಾಸಿಯಲ್ಲಿ ಕದಂಬ ಅರಸರಿದ್ದರು. ಅಶೋಕನು (ಕ್ರಿ. ಪೂ. ೨೩೧) ರಕ್ಷಿತನೆಂಬ ಧರ್ಮೋಪದೇಶಕನನ್ನು ಬನವಾಸಿಗೂ ಮಹಾದೇವನೆಂಬುವನನ್ನು ಮಹಿಷಮಂಡಲಕ್ಕೂ ಕಳುಹಿಸಿರುವುದಾಗಿ ಆಧಾರವು ದೊರೆಯುತ್ತದೆ.
ಮುಂದೆ ನಾಲ್ಕನೆಯ ಶತಮಾನದಲ್ಲಿ, ಗುಪ್ತ ವಂಶದ ಸಮುದ್ರಗುಪ್ತನೆಂಬುವನು ಹಿಂದುಸ್ಥಾನವನ್ನೆಲ್ಲ ಪಾದಾಕ್ರಾಂತ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ದಕ್ಷಿಣಕ್ಕೆ ಕಂಚಿಯವರೆಗೆ ಹೋಗಿ ಕರ್ನಾಟಕದೊಳಗಿನ ೧೧ ರಾಜ್ಯಗಳಲ್ಲಿ ಹಾಯ್ದು ಉತ್ತರಕ್ಕೆ ತೆರಳಿದನು. ಸಮುದ್ರಗುಪ್ತನ ತರುವಾಯ ಕರ್ನಾಟಕಕ್ಕೆ ಸಂಬಂಧಪಟ್ಟ ಉತ್ತರದ ಸಾರ್ವಭೌಮ ರಾಜನೆಂದರೆ ಹರ್ಷವರ್ಧನನೇ. ಕರ್ನಾಟಕದ ಪ್ರಖ್ಯಾತ ರಾಜನಾದ ೨ನೆಯ ಪ್ರಲಕೇಶಿಯು ಕ್ರಿ.ಶ. ೬೩೪ರಲ್ಲಿ ಸೋಲಿಸಿದ ಹರ್ಷವರ್ಧನನು ಇವನೇ.
ಮೇರೆಗೆ, ಉತ್ತರದಲ್ಲಿ ಮೌರ್ಯರೂ, ಸುಂಗರೂ, ಆಂಧ್ರರೂ, ಗುಪ್ತರೂ ಅತಿ ಬಲಾಡ್ಯರಾಗಿ ಆಳುತ್ತಿದ್ದಾಗ ನಮ್ಮ ದೇಶದಲ್ಲಿ, ಕದಂಬ ಮುಂತಾದ ಚಿಕ್ಕ ಚಿಕ್ಕ ರಾಜ್ಯಗಳು ಮಾತ್ರ ಅಲ್ಲಲ್ಲಿಗೆ ಆಳುತ್ತಿದ್ದುವು, ಆದರೆ ದಕ್ಷಿಣಾ ಪಥದ ವೈಭವದ ಇತಿಹಾಸವು ಹೀಗೆ ತಡವಾಗಿ ಪ್ರಾರಂಭವಾದರೂ, ಅದು ಮುಂದೆ ಅನೇಕ ಶತಮಾನಗಳ ವರೆಗೆ ಬಾಳಿತೆಂಬುದನ್ನು ಮರೆಯಕೂಡದು. ಕ್ರಿ.ಶ. ಪ್ರಾರಂಭಕ್ಕೆ ಈ ದೇಶದ ಕೆಲವು ಭಾಗದಲ್ಲಿ ಆಂಧ್ರಭೃತ್ಯರು ಆಳುತ್ತಿದ್ದರು. ಇವರ ರಾಜ್ಯವು ಕೃಷ್ಣಾ ಮತ್ತು ಗೋವಾವರೀ ನದಿಗಳ ಮುಖದವರೆಗೆ ಹಬ್ಬಿತ್ತು.