ಪುಟ:ಕರ್ನಾಟಕ ಗತವೈಭವ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಕರ್ನಾಟಕ ಗತವೈಭವ


ಬೀಜವು ರಾಷ್ಟ್ರಕೂಟರ ಕಾಲದಲ್ಲಿ ವೃಕ್ಷವಾಗಿ ಬೆಳೆದು, ಅದರ ಸವಿಯಾದ ಫಲಗಳು ಈ ಕಲ್ಯಾಣಚಾಲುಕ್ಯರ ಕಾಲದಲ್ಲಿ ತಿನ್ನಲಿಕ್ಕೆ ದೊರೆತವು. ಇವರ ಕಾಲದಲ್ಲಿ ಕನ್ನಡಿಗರ ಕೀರ್ತಿಯು ದಶದಿಕ್ಕುಗಳಲ್ಲಿ ಹಬ್ಬಿತು. ಕನ್ನಡಿಗರ ಧ್ವಜಪತಾಕೆಯು ಈಶಾನ್ಯಕ್ಕೆ ಅಸಾಮ ಪ್ರಾಂತದಲ್ಲಿ ಊರಲ್ಪಟ್ಟಿತು, ಕರ್ನಾಟಕ ಅರಸರು ಅನೇಕ ಕವಿ ಪುಂಗವರಿಗೂ ವಿದ್ವಜ್ಜನರಿಗೂ ಆಶ್ರಯದಾತರಾದರು. ಈ ಬಗೆಯಾಗಿ ಕನ್ನಡಿಗರಿಗೆ ಅತ್ಯಂತ ಅಭಿಮಾನಾಸ್ಪದವಾದ ಈ ಚಾಲುಕ್ಯರ ಇತಿಹಾಸವನ್ನು ಇಲ್ಲಿ ಕೊಡುವೆವು.
ಚಾಲುಕ್ಯ ವಂಶದ ಮೂಲಪುರುಷನು ತೈಲಪನು. ಇವನು ಚೋಳ ಅರಸನನ್ನೂ ಚೇದಿ (ಬುಂದೇಲಖಂಡ) ಅರಸನನ್ನೂ ಗೆದ್ದನು. ಈ ತೈಲಪನು ಗುಜರಾಥ ಚಾಲುಕ್ಯ ವಂಶದ ಮೂಲಪುರುಷನಾದ ಮೂಲರಾಜನ ಮೇಲೆ ಬಾರಪ್ಪ ನೆಂಬವನನ್ನು ಕಳಿಸಿದನು. ಆತನು ಮೂಲರಾಜನನ್ನು ಸೋಲಿಸಿದನು. ಆ ಮೇಲೆ ತೈಲಪನು ಮಾಳವದೇಶದ ಮೇಲೆ ದಾಳಿಯಿಟ್ಟನು. ಭಾರತೀಯರಿಗೆಲ್ಲರಿಗೂ ಅತಿ ಪರಿಚಿತನಾದ ಪ್ರಸಿದ್ದ ಭೋಜರಾಜನ ಕಕ್ಕನಾದ ಮುಂಜನೆಂಬವನೇ ಆಗ ಮಾಳವಾಧಿಪತಿಯಾಗಿದ್ದನು. ಈ ಮುಂಜನು ದೊಡ್ಡ ಸೈನ್ಯದೊಂದಿಗೆ ಗೋದಾವರಿಯನ್ನು ದಾಟಿ ಬಂದು ತೈಲಪನನ್ನು ಕೆಣಕಿದನು. ಆದರೆ ತೈಲಪನು ಅವನನ್ನು ಸೋಲಿಸಿ ಸೆರೆಹಿಡಿದನು. ಮುಂಜನು ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದರಿಂದ ತೈಲಪನು ಆತನ ತಲೆ ಹಾರಿಸಿದನು. ಈತನ ಮಾಂಡಲಿಕನೊಬ್ಬನು ಸವದತ್ತಿಯಲ್ಲಿ ಜೈನಗುಡಿಗೆ ಭೂಮಿದಾನ ಕೊಟ್ಟಿರುತ್ತಾನೆ. ತೈಲಪನ ಹೆಂಡತಿಯ ಹೆಸರು ಜಾಕವ್ವ, ಇವಳು ತೈಲವನು ಮುರಿದ ರಾಷ್ಟ್ರಕೂಟವಂಶದ ರಾಜಪುತ್ರಿಯು.
ತೈಲಪನ ತರುವಾಯ (೧೦೪೦) ಈ ವಂಶದ ದೊಡ್ಡ ಅರಸನು ಸೋಮೇಶ್ವರ ಅಹವಮಲ್ಲನು. ಪಟ್ಟವೇರಿದ ಕೂಡಲೆ ಇವನು ಚೋಳರಾಜನೊಡನ ಕಾದಬೇಕಾಯಿತು. ಅವನನ್ನು ಗೆದ್ದ ನಂತರ ಉತ್ತರಕ್ಕೆ ತೆರಳಿ ಭೋಜನ ರಾಜಧಾನಿಯಾದ ಧಾರಾ ಪಟ್ಟಣವನ್ನು ತೆಗೆದುಕೊಂಡನು. ಚೇದಿ ಅರಸನಾದ ಕರ್ಣನನ್ನು ಹಿಡಿದು ಕೊಂದನು. ಅಲ್ಲಿಂದ ಹೊರಟು ಪಶ್ಚಿಮ ಸಮುದ್ರದ ಕಡೆಗೆ ತಿರುಗಿ ಅಲ್ಲಿಯ ಅರಸನನ್ನು ಗೆದ್ದು, ವಿಜಯಸ್ತಂಭವನ್ನು ಊರಿ, ಸಮು