ಪುಟ:ಕರ್ನಾಟಕ ಗತವೈಭವ.djvu/೯೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ
೬೪
ಕರ್ನಾಟಕ ಗತವೈಭವ

ತಮ್ಮ ತಂದೆಯು ಸತ್ತ ಸುದ್ದಿ ಯನ್ನು ಕೇಳಿ, ರಾಜಧಾನಿಗೆ ಬಂದು ತಾನು ತಂದ ಸುಲಿಗೆಯನ್ನೆಲ್ಲ ಅಣ್ಣನ ವಶಕ್ಕೆ ಒಪ್ಪಿಸಿದನು. ಆದರೆ ಈ ಸೋಮೇಶ್ವರನ ಆಳ್ವಿಕೆಯು ಪ್ರಜೆಗಳಿಗೆ ಸುಖಕರವಾಗಲಿಲ್ಲ. ಅವನು ತನ್ನ ಮಂತ್ರಿಗಳ ಮಾತನ್ನೂ ಕೇಳಲಿಲ್ಲ. ತನ್ನ ಕುಶಲ ತಮ್ಮನಾದ ವಿಕ್ರಮಾದಿತ್ಯನ ಉಪದೇಶಕ್ಕೂ ಕಿವಿಗೊಡಲಿಲ್ಲ. ಮನಬಂದಂತೆ ವರ್ತಿಸಿ ಪ್ರಜೆಗಳನ್ನು ಅಸಂತುಷ್ಟ ಪಡಿಸಿದನು. ಇಷ್ಟೇ ಅಲ್ಲ, ತನ್ನ ತಮ್ಮನಾದ ವಿಕ್ರಮಾದಿತ್ಯನಿಗೆ ವಿರುದ್ಧವಾಗಿಯೇ ಪ್ರಯತ್ನ ನಡಿಸಿದನು. ಈ ಸಂಗತಿಯನ್ನು ತಿಳಿದುಕೊಂಡು, ವಿಕ್ರಮಾದಿತ್ಯನು ದೊಡ್ಡದೊಂದು ಸೈನ್ಯದೊಡನೆ ತನ್ನ ತಮ್ಮನಾದ ಜಯಸಿಂಹನನ್ನು ಕರೆದುಕೊಂಡು ರಾಜಧಾನಿಯನ್ನು ಬಿಟ್ಟನು. ಸೋಮೇಶ್ವರನು ತಮ್ಮನನ್ನು ಹಿಡಿಯಲಿಕ್ಕೆ ಸೈನ್ಯ ಕಳುಹಿದನು. ಆದರೆ ವಿಕ್ರಮನು ಅದನ್ನು ನುಚ್ಚು ನುರೆಯಾಗಿ ಮಾಡಿದನು. ಅನಂತರ ವಿಕ್ರಮನು ಕದಂಬರನ್ನು ಕೂಡಿಕೊಂಡು, ಅವರ ಅರಸನಾದ ಜಯಕೇಶಿಯಿಂದ ವಿಪುಲವಾಗಿ ಧನಕನಕಾದಿಗಳನ್ನು ತೆಗೆದುಕೊಂಡು ಚೋಳರಾಜ್ಯದ ಕಡೆಗೆ ತಿರುಗಿದನು. ಸೋಮೇಶ್ವರನ ಆಳಿಕೆಗೆ ಜನರು ಮೊದಲೇ ಬೆಸತ್ತದರಿಂದ, ವಿಕ್ರಮನು ಹೋದ ಹೋದಲ್ಲಿ, ಮಾಂಡಲಿಕ ಅರಸರು ಅವನನ್ನು ಗೌರವಿಸುತ ಬಂದರು. ಆಳುಪ ಕೇರಳ ಮುಂತಾದ ರಾಜ್ಯಗಳ ಅರಸರು ಈ ಬಗೆ ಯಾಗಿ ವಿಕ್ರಮನಿಗೆ ನೆರವಾದುದರಿಂದ, ಅವನು ಧೈರ್ಯದಿಂದ ಚೋಳರಾಜ್ಯದ ದಾರಿ ಹಿಡಿದು ಅಲ್ಲಿಗೆ ಬಂದು ಸೈನ್ಯದೊಂದಿಗೆ ತಲ್ಪಿದನು. ಅಲ್ಲಿಯ ಅರಸನು ವಿಕ್ರಮನೊಡನೆ ಸಂಧಿಯನ್ನು ಮಾಡಬೇಕೆಂದು ಕುತೂಹಲವುಳ್ಳವನಾಗಿ, ತನ್ನ ಮಗಳನ್ನು ಅವನಿಗೆ ಮದುವೆಮಾಡಲು ಇಚ್ಚಿಸಿದನು. ವಿಕ್ರಮನು ಬಹು ಧೂರ್ತನು. ಅವನು ಈ ಸುಸಂಧಿಯನ್ನು ಕಳೆದುಕೊಳ್ಳದೆ ಆ ಚೋಳರಾಜ ಪುತ್ರಿಯನ್ನು ಮದುವೆ ಮಾಡಿಕೊಂಡು ಅವಳೊಂದಿಗೆ ತುಂಗಭದ್ರಾ ನದಿಯ ತೀರಕ್ಕೆ ಬಂದು ತಳ ಊರಿದನು. ಕೆಲವು ದಿವಸಗಳಲ್ಲಿಯೇ ಚೋಳ ರಾಜ್ಯದಲ್ಲಿ ದೊಡ್ಡ ಕ್ರಾಂತಿಯಾಯಿತು. ವಿಕ್ರಮನ ಮಾವನು ಮಡಿದನು, ಒಡನೆಯೆ ವಿಕ್ರಮನು ಕಂಚಿಗೆ ಹೋಗಿ ತನ್ನ ಬೀಗನನ್ನು ಪಟ್ಟಕ್ಕೆ ಕುಳ್ಳಿರಿಸಿದನು. ಆದರೆ ವಿಕ್ರಮನು ಮರಳಿ ಬಂದ ಕೂಡಲೆ, ವೆಂಗಿದೇಶದ ಅರಸನಾದ ಕುಲೋತ್ತುಂಗ ಅಥವಾ ರಾಜಿಗನೆಂಬ ಮಹಾ ಪ್ರತಾಪಿಯು ವಿಕ್ರಮನ ಬೀಗನನ್ನು ಗಾದಿಯಿಂದ ತಳ್ಳಿ ಚೋಳ